ಗುರುಪುರ : ಗುರುಪುರದ ದೋಣಿಂಜೆಯ ಹಡೀಲು ಭೂಪ್ರದೇಶದಲ್ಲಿ ಮಂಗಳವಾರ ರಾತ್ರಿ ಹತ್ತಿಕೊಂಡ ಭಾರೀ ಬೆಂಕಿಗೆ ನೂರಾರು ಮರಗಿಡಗಳು ಸುಟ್ಟು ಕರಕಲಾಗಿದ್ದು, ಸ್ಥಳೀಯ ನಿವಾಸಿಗರು ತೀವ್ರ ಆತಂಕ ವ್ಯಕ್ತಪಡಿಸಿದರು.

ಇದೇ ಪ್ರದೇಶದಲ್ಲಿ ಮೊನ್ನೆಯೂ ಬೆಂಕಿ ಹತ್ತಿಕೊಂಡಿದ್ದು, ಗಾಳಿಯ ವೇಗ ಕಡಿಮೆ ಇದ್ದ ಕಾರಣ ಸ್ವಲ್ಪ ಪ್ರದೇಶಕ್ಕೆ ಬೆಂಕಿ ವಿಸ್ತರಿಸಿಕೊಂಡಿತ್ತು. ಆದರೆ ಮಂಗಳವಾರ ರಾತ್ರಿ ಗಾಳಿ ವೇಗ ಹೆಚ್ಚಿದ್ದರಿಂದ ತಿಳಿಗೇಡಿಗಳು ಹಚ್ಚಿದ ಬೆಂಕಿ ಎಲ್ಲೆಡೆ ವ್ಯಾಪಿಸಿತು. ನೋಡನೋಡುತ್ತಿದ್ದಂತೆ ತಿಳಿಗೇಡಿಗಳು ಹಚ್ಚಿದ ಬೆಂಕಿ ಕೆನ್ನಾಲಗೆ ಆಕಾಶದೆತ್ತರಕ್ಕೆ ಹಬ್ಬಿತು. ಇನ್ನೂ ಒಂದಷ್ಟು ವಿಸ್ತರಿಸುತ್ತಿದ್ದರೆ ನೂರಾರು ಮನೆಗಳಿಗೆ ಅಪಾಯ ಕಾದಿತ್ತು.

gur-may-15-gurpur fire-1

ಎಲ್ಲೆಡೆ ಹೊಗೆ ಆವರಿಸಿದ್ದರಿಂದ ಬೆಂಕಿ ನಂದಿಸುವುದು ಪರಿಸರವಾಸಿಗಳಿಗೆ ಕಷ್ಟವಾಗಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಮಂಗಳೂರು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನ ಟ್ಯಾಂಕರ್ ಮೂಲಕ ಸ್ಥಳಕ್ಕಾಗಮಿಸಿ, ಸುಮಾರು ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸಿದರು.

ಹತ್ತಿರದಲ್ಲಿ ಬೆಳೆಸಲಾದ ತರಕಾರಿ ತೋಟಕ್ಕೆ ನವಿಲುಗಳ ಕಾಟ ತಪ್ಪಿಸಲು, ದೂರದ ಹಡೀಲು ಭೂಮಿಯಲ್ಲಿ ಬೆಳೆದಿರುವ ಭಾರೀ ಗಿಡಗಂಟಿ, ಒಣ ಹುಲ್ಲಿಗೆ ಬೆಂಕಿ ಹಚ್ಚಿರಬೇಕೆಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಭಾಗದ ಹಡೀಲು ಗದ್ದೆಗಳ ಪೊದೆಗಳಲ್ಲಿ ನೂರಾರು ನವಿಲುಗಳು, ನರಿಗಳು ಮತ್ತು ಹಾವುಗಳು ವಾಸಿಸುತ್ತಿವೆ. ಇವುಗಳಿಂದ ತರಕಾರಿ ತೋಟಕ್ಕೆ ಅಪಾಯವಿದೆ ಎಂದು ಹೇಳಲಾಗುತ್ತಿದೆ.

By suddi9

Leave a Reply

Your email address will not be published. Required fields are marked *