ಕೈಕಂಬ : ನಳಿನ್ ಕುಮಾರ್ ಕಟೀಲ್ ಜಿಲ್ಲೆಗೆ ದೇವರೇ ಕಳುಹಿಸಿದ ಅಭ್ಯರ್ಥಿ. ಇಂತಹ ಅಭ್ಯರ್ಥಿಯ ಗೆಲ್ಲಿಸಲು ನಾವೆಲ್ಲರೂ ಯುಗಾದಿಯ ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು. ತನ್ಮೂಲಕ ದೇಶದಲ್ಲಿ ನರೇಂದ್ರ ಮೋದಿ ಮತ್ತೊಂದು ಬಾರಿ ಪ್ರಧಾನಿಯಾಗಬೇಕು ಎಂದು ನಟಿ, ಎಂಎಲ್ಸಿ ತಾರಾ ಅನುರಾಧ ಹೇಳಿದರು. ಎ. 4ರಂದು ಸಂಜೆ ಗುರುಪುರ ಕೈಕಂಬ ಗಣೇಶಕಟ್ಟೆಯ ಬಳಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಚುನಾವಣಾ ಪ್ರಚಾರ ಭಾಷಣ ಮಾಡಿದ ತಾರಾ, ಮಹಿಳೆಯರಿಗೆ ಶೇ 33 ಮೀಸಲಾತಿ ವಿಷಯ ಪ್ರಸ್ತಾವಿಸುತ್ತಿರುವ ಕಾಂಗ್ರೆಸ್, ಈ ಬಾರಿ ಶೇ 10ರಷ್ಟು ಮಹಿಳೆಯರಿಗೂ ಪಕ್ಷದ ಟಿಕೆಟು ನೀಡಿಲ್ಲ. ಮಹಿಳೆಯರ ಬಗ್ಗೆ ಕಾಂಗ್ರೆಸ್ಸಿನಲ್ಲಿ ತಾತ್ಸಾರ ಭಾವನೆ ಇದೇ ಇದೆ. ಬಡತನ ನಿರ್ಮೂಲನೆ ಕಾಂಗ್ರೆಸ್ ಅಥವಾ ಹಿಂದಿನ ಯುಪಿಎ ಸರ್ಕಾರ ಏನೂ ಮಾಡಿಲ್ಲ.
ಮೋದಿಯವರು ಈ ದೇಶದ ಅಭಿವೃದ್ಧಿಗಾಗಿ ಪ್ರಕಟಿಸಿ ಬಹುತೇಕ ಎಲ್ಲ ಯೋಜನೆ ಅನುಷ್ಠಾನಗೊಂಡಿದೆ. ಮೋದಿ ಕಾರ್ಯ ದಕ್ಷತೆಗೆ ವಿದೇಶಿ ನಾಯಕರಿಂದ ಅಭಿನಂದನೆಗಳು ಬಂದಿವೆ ಎಂದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಕಳೆದ ಐದು ವರ್ಷದ ಅವಧಿಯಲ್ಲಿ ಮೋದಿ ಸರ್ಕಾರ ದೇಶದ ಗಡಿ ರಕ್ಷಣೆ ಮತ್ತು ದೇಶದ ಅಭಿವೃದ್ಧಿಗಾಗಿ ಅಹೋರಾತ್ರಿ ಕೆಲಸ ಮಾಡಿದೆ. ಆದರೆ ವಿಪಕ್ಷಗಳು ರಾಜಕೀಯ ಲಾಭದುದ್ದೇಶದಿಂದ ಮೋದಿ ಸಾಧನೆಗೆ ಹೊಟ್ಟೆ ಕರುಬುತ್ತಿವೆ. ಪಾಕಿಸ್ತಾನದೊಳಗೆ ಪ್ರವೇಶಿಸಿ ಭಯೋತ್ಪಾದಕರ ಶಿಬಿರಗಳ ನಾಶ ಮಾಡಿದ ನಮ್ಮ ಸೈನಿಕರ ಸಾಧನೆಯನ್ನೇ ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಿದ್ದಾರೆ. ಯುಪಿಎ ಸರ್ಕಾರ ಪಾಕ್ ಭಯೋತ್ಪಾದಕ ಕಸಬನಿಗೆ ಜೈಲಿನಲ್ಲಿ ಬಿರಿಯಾನಿ ತಿನ್ನಿಸಿದರೆ, ಮೋದಿ ಸರ್ಕಾರ ಭಯೋತ್ಪಾದಕರ ಹೆಡೆಮುರಿ ಕಟ್ಟಿ ಆ ಪಾಕಿಗೆ ಪಾಠ ಕಲಿಸಿದೆ ಎಂದು ಗಡುಗಿದರು.
ಕರಾವಳಿಗರಿಗೆ `ತಿಳುವಳಿಕೆ ಕಡಿಮೆ’, ಹಾಗಾಗಿ ಇಲ್ಲಿನವರು ಬಿಜೆಪಿಗೆ ಮತ ಹಾಕುತ್ತಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಅವರಿಗೆ ಉತ್ತರ ನೀಡುವ ತಾಕತ್ತು ಇಲ್ಲಿನ ಕಾಂಗ್ರೆಸ್ಸಿಗರಿಗೆ ಇದೆಯೇ ಎಂದ ಡಾ. ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ರಮಾನಾಥ ರೈ, ಮೊೈದಿನ್ ಬಾವ, ಮಿಥುನ್ ರೈ ಸಹಿತ ಕಾಂಗ್ರೆಸ್ಸಿಗರಿಗೆ ಸವಾಲೆಸೆದರು. ಬಿಜೆಪಿ ಮುಖಂಡ ಸೋಹನ್ ಅಥಿಕಾರಿ ಸ್ವಾಗತಿಸಿದರು. ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ರೂಪೇಶ್ ಕುಮಾರ್ ಅದ್ಯಪಾಡಿ, ಅಮೃತ್ಲಾಲ್ ಡಿ’ಸೋಜ, ಸುಲೋಚನಾ ಭಟ್ ಜಿ.ಕೆ, ಪೂಜಾ ಪೈ, ಮಂಗಳೂರು ಕಾರ್ಪೊರೇಟರ್ ರೂಪಾ ಡಿ. ಬಂಗೇರ ಇದ್ದರು. ಶೋಭಾ ದಾಮೋದರ್ ವಂದಿಸಿದರು.


