ಗುರುಪುರ : ಗುರುಪುರದಲ್ಲಿ ಮಂಗಳವಾರ ಬೆಳಿಗ್ಗೆ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ಸೊಂದರಡಿ ಬಿದ್ದ ಪೊಲೀಸ್ ಪೇದೆ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಸಂಭವಿಸಿತು.ಮೃತ ನತದೃಷ್ಟ ಪೊಲೀಸ್ ಪೇದೆ ಮಂಗಳೂರು ಐಜಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದು, ಕಾರ್ಕಳದ ಬೆಳುವಾಯಿಯ ದೇವಿನಗರದ ಶಿವಶಕ್ತಿ ಕೃಪಾದ ನಿವಾಸಿ ಚನ್ನಪ್ಪ ಲಮಾಣಿಯ ಪುತ್ರ ಮಹೇಶ್ ಲಮಾಣಿ(32) ಎಂದು ಗುರುತಿಸಲಾಗಿದೆ. ಇವರು ಕರ್ತವ್ಯ ನಿಮಿತ್ತ ತನ್ನ ಬೈಕಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಬೆಳಿಗ್ಗೆ ಸುಮಾರು 8:45ಕ್ಕೆ ಗುರುಪುರ ಜಂಕ್ಷನ್‍ಗೆ ಮೇಲ್ಗಡೆ ಅಪಘಾತ ಸಂಭವಿಸಿದೆ.
ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಮಂಗಳೂರು-ಕಾರ್ಕಳ ರೂಟಿನ ಖಾಸಗಿ `ವಿಶಾಲ್’ ಎಕ್ಸ್‍ಪ್ರೆಸ್ ಬಸ್ ಗುರುಪುರದಲ್ಲಿ ಮಂಗಳೂರಿನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಮತ್ತೊಂದು ಎಕ್ಸ್‍ಪ್ರೆಸ್ ಬಸ್ಸಿಗೆ ಡಿಕ್ಕಿಯಾಗಿ ಮುಂದೆ ಹೋಯಿತು. ವೇಗ ನಿಯಂತ್ರಣಕ್ಕೆ ಬರದ ಖಾಸಗಿ ಬಸ್ ಮುಂದಿದ್ದ ಬೈಕಿಗೆ ಡಿಕ್ಕಿಯಾಗಿದ್ದು, ಬೈಕ್ ರಸ್ತೆ ಬದಿಗೆ ಎಸೆಯಲ್ಪಟ್ಟಿದೆ. ಬೈಕಿನಲ್ಲಿದ್ದ ಮಹೇಶ್ ಹೆಲ್ಮೆಟ್ ನುಚ್ಚುನೂರಾಗಿದ್ದು, ರಸ್ತೆ ಮಧ್ಯೆ ಬಿದ್ದಿದ್ದ ಅವರ ತಲೆ ಮತ್ತು ದೇಹದ ಒಂದು ಭಾಗದಲ್ಲಿ ಬಸ್ಸಿನ ಹಿಂದಿನ ಚಕ್ರ ಹರಿದು, ಸ್ಥಳದಲ್ಲಿಯೇ ಅಸುನೀಗಿದರು. ಮಿದುಳು ಹಾಗೂ ದೇಹದ ಒಂದು ಬದಿಯ ಅಂಗಾಂಗ ರಸ್ತೆಯಲ್ಲಿ ರಕ್ತಸಿಕ್ತಗೊಂಡು ಚೆಲ್ಲಿ ಹೋಗಿದೆ. ಘಟನೆ ನಡೆದ ತಕ್ಷಣ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಬಸ್ ಅಲ್ಲೇ ನಿಲ್ಲಿಸಿದ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕಾಗಮಿಸಿದ ಬಜ್ಪೆ ಪೊಲೀಸರು ಮಹಜರು ನಡೆಸಿ, ಗುರುಪುರ ಸೇವಾ ಬ್ರಿಗೇಡ್ ಆಂಬುಲೆನ್ಸ್ ಮೂಲಕ ಶವವನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಸಂದರ್ಭದಲ್ಲಿ ಗುರುಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಮೀ ಉದ್ದಕ್ಕೆ ವಾಹನ ನಿಂತಿದ್ದು, ಸುಮಾರು ಒಂದು ತಾಸು ಟ್ರಾಫಿಕ್ ದಟ್ಟಣಿ ಉಂಟಾಗಿತ್ತು. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.ಖಾಸಗಿ ಎಕ್ಸ್‍ಪ್ರೆಸ್ ಬಸ್ ಕೈಕಂಬದಿಂದಲೇ ಯಮುವೇಗದಲ್ಲಿ ಬರುತ್ತಿತ್ತು. ದಾರಿ ಮಧ್ಯೆ ಟಿಪ್ಪರೊಂದನ್ನು ಓವರ್‍ಟೇಕ್ ಮಾಡಿ ಮುಂದೆ ಬಂದಾಗಲೇ ಬಸ್ಸಿನೊಳಗಿದ್ದ ಪ್ರಯಾಣಿಕರು ಬೊಬ್ಬೆ ಹಾಕಿದ್ದಾರೆಂದು ಬಸ್ಸಿನ ಪ್ರಯಾಣಿಕರೊಬ್ಬರು ಹೇಳಿದರು. ಬಸ್ಸಿನ ರಂಪಾಟಕ್ಕೆ ಪ್ರಯಾಣಿಕರೊಬ್ಬರಿಗೆ ತರಚು ಗಾಯವಾಗಿದೆ. ಅಪಘಾತ ಸಂಭವಿಸಿದ ಮೇಲ್ಗಡೆ ಹೆದ್ದಾರಿಗೆ ಹಾಕಲಾದ ಹಂಪ್ಸ್‍ಗೆ ಬಣ್ಣ ಬಳಿಯದ ಕಾರಣ ಹಂಪ್ಸ್ ಗುರುತಿಸುವಲ್ಲಿ ಬಸ್ಸಿನ ಚಾಲಕ ವಿಫಲನಾಗಿದ್ದಾನೆಂದು ಸ್ಥಳೀಯರೊಬ್ಬರು ಹೇಳಿದ್ದಾರೆ.



