ಬಂಟ್ವಾಳ: ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಜಂಟಿಯಾಗಿ ಆಯೋಜಿಸಿದ ಮಂಗಳೂರು ವಿ.ವಿ. ಮಟ್ಟದ ಅಂತರ ಕಾಲೇಜು ಪುರುಷರ ಖೋ-ಖೋ ಪಂದ್ಯಾಟದ ’ಚಾಂಪಿಯನ್ಸ್’ ಸುತ್ತಿನಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ಪ್ರಥಮ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ ವಿಶ್ವವಿದ್ಯಾನಿಲಯ ಕ್ಯಾಂಪಸ್ ಕಾಲೇಜು ತೃತೀಯ , ಸ.ಪ್ರ.ದ.ಕಾಲೇಜು ವಾಮದಪದವು ಚತುರ್ಥ ಸ್ಥಾನವನ್ನು ಪಡೆದುಕೊಂಡಿವೆ. ಪ್ರಾಥಮಿಕ ವಿಭಾಗದಲ್ಲಿ ಎಸ್.ಎಮ್.ಎಸ್. ಕಾಲೇಜು ಬ್ರಹ್ಮಾವರ ಪ್ರಥಮ ಸ.ಪ್ರ.ದ. ಕಾಲೇಜು ಜಡೇಕಲ್ ದ್ವಿತೀಯ ಸ್ಥಾನವನ್ನು ಪಡೆಯಿತು. ಸ.ಪ್ರ.ದ.ಕಾಲೇಜು ರಥಬೀದಿ ಮಂಗಳೂರು ತೃತೀಯ ಹಾಗೂ ಮಂಜುನಾಥ ಪೈ ಸ್ಮಾರಕ ಸ.ಪ್ರ.ದ.ಕಾಲೇಜು ಕಾರ್ಕಳ ಚತುರ್ಥ ಸ್ಥಾನವನ್ನು ತನ್ನದಾಗಿಸಿಕೊಂಡಿವೆ.
ಸ.ಪ್ರ.ದ.ಕಾಲೇಜು ವಾಮದಪದವಿನ ಸುದೀಪ್ ’ಬೆಸ್ಟ್ ಚೇಸರ್’ ಆಳ್ವಾಸ್ ಕಾಲೇಜಿನ ಶಿವಣ್ಣ ’ಬೆಸ್ಟ್ ಡಾಡ್ಜರ್’ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ವಿಜಯ್ ಪಾಂಡೆ ’ಬೆಸ್ಟ್ ಆಲ್ ರೌಂಡರ್’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಕಬ್ಬಡಿ ಮತ್ತು ಖೋ-ಖೋ ತರಬೇತುದಾರ ಮಾಧವ ಬಿ.ಕೆ., ಮಂಗಳೂರು ವಿ.ವಿ. ವೀಕ್ಷಕರಾಗಿ ಕೃಷ್ಣಮೂರ್ತಿ ವೈದ್ಯ ಉಪಸ್ಥಿತರಿದ್ದರು. ಸ್ಥಳೀಯರಾದ ಶ್ರೀಧರ ಪೈ, ನವೀನ್‌ಚಂದ್ರ ಶೆಟ್ಟಿ, ಮೋಹನ್ ಶೆಟ್ಟಿ ನರವಲ್‌ದಡ್ಡ ಮುಖ್ಯ ಅತಿಥಿಗಳಾಗಿದ್ದರು. ಕು. ಮೋಹಿನಿ ತಂಡ ಪ್ರಾರ್ಥಿಸಿದರು, ವಾಣಿಜ್ಯ ವಿಭಾಗದ ಕು. ಶ್ವೇತಲತಾ ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಚಂದ್ರಕಾಂತ ಶೆಣೈ ವಂದಿಸಿದರು, ಕನ್ನಡ ವಿಭಾಗದ ರೇಷ್ಮಾ ಜಿ. ಭಟ್ ಕಾರ್ಯಕ್ರಮ ನಿರೂಪಿಸಿದರು.
