ಕೈಕಂಬ: ಮೂಲರಪಟ್ಣ ಫಲ್ಗುಣಿ ನದಿಗೆ ಅಡ್ಡಲಾಗಿ ಸಾರ್ವಜನಿಕರೇ ನಿರ್ಮಿಸಿದ ಮಣ್ಣಿನ ರಸ್ತೆಯಲ್ಲಿ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಸ್ತೆ ಹಾದುಹೋಗಿರುವ ಖಾಸಗಿ ಜಾಗದ ಮಾಲಿಕರಿಗೆ ಬಜಪೆ ಪೊಲೀಸರು ನೋಟೀಸ್ ನೀಡಿದ ಕಾರಣದಿಂದಾಗಿ ಜಾಗದ ಮಾಲಿಕರು ತನ್ನ ಜಾಗದಲ್ಲಿ ಹಾದುಹೋಗಿರುವ ರಸ್ತೆಯನ್ನು ಬಂದ್ ಮಾಡಿದ ಘಟನೆ ಬುಧವಾರ ಬೆಳಿಗ್ಗೆ ಮುತ್ತೂರು ಭಾಗದಲ್ಲಿ ನಡೆದಿದೆ.

ಕಳೆದ ವರ್ಷ ಮೂಲರಪಟ್ಣ ಸೇತುವೆ ಮುರಿದು ಬಿದ್ದ ನಂತರ ಮುತ್ತೂರು-ಬಂಟ್ವಾಳ ಸಂಚಾರ ಮೊಟಕುಗೊಂಡಿದ್ದು ಸಂಚಾರಕ್ಕಾಗಿ ಸಾರ್ವಜನಿಕರು ತೂಗುಸೇತುವೆಯನ್ನು ಅವಲಂಬಿಸಿಕೊಂಡಿದ್ದರು. ಆದರೆ ಹೊಸ ಸೇತುವೆ ವಿಳಂಬವಾಗಿರುವುದನ್ನು ಗಮನಿಸಿದ ಸಾರ್ವಜನಿಕರು ಫಲ್ಗುಣಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಮೂಲರಪಟ್ಣ ಮಸೀದಿ ಸಮೀಪದಿಂದ ಮುತ್ತೂರಿನ ಖಾಸಗಿ ಜಾಗದವರೆಗೆ ನದಿಗೆ ಅಡ್ಡಲಾಗಿ ಮೋರಿ ಅಳವಡಿಸಿ, ಲೋಡ್‍ಗಟ್ಟಲೆ ಮಣ್ಣು ತುಂಬಿಸಿ ತಾತ್ಕಾಲಿಕ ಮಣ್ಣಿನ ರಸ್ತೆಯನ್ನು ನಿರ್ಮಿಸಿದ್ದರು. ಬಸ್‍ಗಳನ್ನು ಹೊರತುಪಡಿಸಿ ಇನ್ನಿತರ ಎಲ್ಲ ವಾಹನಗಳು ಸಂಚರಿಸುತ್ತಿರುವುದರಿಂದ ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಿತ್ತು. ಈ ನಡುವೆ ನಿನ್ನೆ ವ್ಯಕ್ತಿಯೋರ್ವರು ಬಜಪೆ ಠಾಣೆಗೆ ದೂರವಾಣಿ ಕರೆ ಮಾಡಿ ತಾತ್ಕಾಲಿಕ ಮಣ್ಣಿನ ರಸ್ತೆಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು.
ನದಿಯ ದಡದಿಂದ ಮುತ್ತೂರಿನ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಒಳರಸ್ತೆಯು ಖಾಸಗಿಯವರ ಜಮೀನಿನಲ್ಲಿ ಹಾದುಹೋಗಿತ್ತು. ಬಜಪೆ ಪೊಲೀಸರು ಖಾಸಗಿಯವರಿಗೆ ಇರುವ ಜಮೀನಲ್ಲಿರುವ ರಸ್ತೆಯ ಮೂಲಕ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂದು ನೋಟೀಸ್ ಜಾರಿ ಮಾಡಿದ್ದರು. ಇದರಿಂದ ಬೇಸರಗೊಂಡ ಖಾಸಗಿ ವ್ಯಕ್ತಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ತನ್ನ ಜಮೀನಿನಲ್ಲಿ ರಸ್ತೆ ನಿರ್ಮಿಸಿಕೊಟ್ಟರೆ ನನಗೆ ಪೊಲೀಸರು ನೋಟೀಸ್ ನೀಡಿದ್ದಾರೆಂದು ಆಕ್ರೋಶಗೊಂಡು ಈ ಜಾಗದಲ್ಲಿ ಗೇಟ್ ಹಾಕಿ ಮುಚ್ಚಿದ್ದರು. ಇದರಿಂದ ಸಾರ್ವಜನಿಕರಿಗೆ ಅನನುಕೂಲ ಉಂಟಾಗಿತ್ತು.
ವಿಷಯ ತಿಳಿದ ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿ ಸ್ಥಳಕ್ಕಾಗಮಿಸಿದ ಪೊಲೀಸರ ಜೊತೆ ನೋಟೀಸ್ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದ ವ್ಯಕ್ತಿ ಯಾರೆಂದು ಕೇಳಿದರು. ಲಿಖಿತ ದೂರು ನೀಡದೆ ಕೇವಲ ಫೋನಿನ ಮೂಲಕ ನೀಡಿದ ದೂರಿನ ಆಧಾರಲ್ಲಿ ನೋಟೀಸ್ ನೀಡಿದ್ದು ಯಾಕೆ? ಈಗ ಅವರು ರಸ್ತೆ ಮುಚ್ಚಿರುವುದರಿಂದ ಸಾರ್ವಜನಿಕರಿಗೆ ಅನನುಕೂಲವಾಗಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರು, ಜಮೀನು ಮಾಲಕರು ಹಾಗೂ ಸಾರ್ವಜನಿಕರ ಜೊತೆ ಪರಸ್ಪರ ಮಾತುಕತೆ ನಡೆಸಿ, ಮನವೊಲಿಸಿ ಮುಚ್ಚಿದ ಗೇಟನ್ನು ತೆರವುಗೊಳಿಸಲಾಯಿತು. ಇದೀಗ ತಾತ್ಕಾಲಿಕ ಮಣ್ಣಿನ ರಸ್ತೆಯಲ್ಲಿ ಮತ್ತೆ ಸಂಚಾರ ಆರಂಭಗೊಂಡಿದೆ.
