ಕೈಕಂಬ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದ ವೀರಯೋಧರಿಗೆ ಕಿಲೆಂಜಾರ್, ಕುಳವೂರು ಮತ್ತು ಮುತ್ತೂರು ಗ್ರಾಮಗಳ ಗ್ರಾಮಸ್ಥರು ಕುಪ್ಪೆಪದವಿನಲ್ಲಿ ಕ್ಯಾಂಡಲ್ ಉರಿಸಿ, ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚಣೆಗೈದು, ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಹಿರಿಯರಾದ ಪ್ರವೀಣ್ ಕುಮಾರ್ ಜೈನ್ ಅಗರಿ, ಆಲ್ಬರ್ಟ್ ದಲ್ಮೇದಾ, ಕೆ. ಉಂಞ, ಜಗನ್ನಾಥ ಶೆಟ್ಟಿ ಶಾಂತಿಗುಡ್ಡೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯಜನಾರ್ದನ ಗೌಡ ಹುತಾತ್ಮ ಯೋಧರ ಭಾವಚಿತ್ರಗಳ ಮುಂದೆ ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತಾಡಿದ ಜನಾರ್ದನ ಗೌಡ, ನಮ್ಮ ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಹೆಮ್ಮೆಯ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ಜಾತಿ, ಧರ್ಮ ಮರೆತು ಒಂದಾಗುವ ಶಕ್ತಿಯೇ ನಮ್ಮ ಯೋಧರಿಗೆ ಬಲ ತುಂಬಲಿದೆ. ಆದರೆ ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದು ವೈರಿ ದೇಶದ ಪರ ಜಯಕಾರ ಹಾಕುವ ದೇಶ ದ್ರೋಹಿಗಳನ್ನು ನಿಗ್ರಹಿಸಬೇಕಾಗಿದೆ ಎಂದರು.
ಕುಪ್ಪೆಪದವು ಪಂಚಾಯತ್ ಉಪಾಧ್ಯಕ್ಷ ಡಿ.ಪಿ. ಹಮ್ಮಬ್ಬ, ಜಗದೀಶ್ ಕುಲಾಲ್ ಪಾಕಜೆ, ಇಗ್ನೇಷಿಯಸ್ ಕುಟಿನ್ಹೋ, ಪ್ರವೀಣ್ ಆಳ್ವ, ಸತೀಶ್ ಬಳ್ಳಾಜೆ ಮುಂತಾದವರು ಉಪಸ್ಥಿತರಿದ್ದರು. ಜಾತಿ ಧರ್ಮ ಮರೆತು ನೂರಾರು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

