ಮೂಡುಬಿದಿರೆ: ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿರುವ, ಸದ್ಯ ಪಾಳುಬಿದ್ದ ಸ್ಥಿತಿಯಲ್ಲಿರುವ ಪೆರೋಡಿ ಶಾಲೆಯನ್ನು ಪಂಚಾಯಿತಿಗೆ ಹಸ್ತಾಂತರಿಸುವಂತೆ, ಇಲ್ಲವೇ ಶಿಕ್ಷಣ ಇಲಾಖೆಯೇ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಳುವಾಯಿ ಗ್ರಾಮಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಈ ಹಿಂದೆ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಚರ್ಚಿಸಿರುವ ಪಾಳುಬಿದ್ದಿರುವ ಪೆರೋಡಿ ಶಾಲೆಯಲ್ಲಿ ಗ್ರಂಥಾಲಯ ಮಾಡುವುದಿದ್ದರೆ ಪಂಚಾಯಿತಿ ಸುಪರ್ದಿಗೆ ನೀಡಬೇಕು, ಇಲ್ಲವೇ ಕನಿಷ್ಠ ಎರಡು ಮಕ್ಕಳನಾದರೂ ಸೇರಿಸಿ ಶಾಲೆಯನ್ನು ತೆರೆಯುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಪಡುಮಾರ್ನಾಡು, ಬೆಳುವಾಯಿ ಕ್ಲಸ್ಟರ್ ಸಮನ್ವಯಕಾರ ಪ್ರಸನ್ನ ಶೈಣೈ ಪ್ರಸ್ತಾಪಿಸಿದರು. ಜನದಟ್ಟನೆಯಿಲ್ಲದ ಪ್ರದೇಶದಲ್ಲಿ ಗ್ರಂಥಾಲಯ ಬೇಡ ಎನ್ನುವ ಸಲಹೆ ಗ್ರಾಮಸ್ಥರು ನೀಡಿದ್ದರು.
ಬೆಳುವಾಯಿ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಭಾಸ್ಕರ ಆಚಾರ್ಯ ಮಾತನಾಡಿ, ಶಾಲೆಯ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳು ಪಂಚಾಯಿತಿಯನ್ನೇ ಗುರಿಯಾಗಿಸುತ್ತೀವೆ. ಪಾಳುಬಿದ್ದಿರುವ ಶಾಲೆಯನ್ನು ನೆಲಸಮ ಮಾಡಿ, ಇಲ್ಲಿನ ಸುಮಾರು 3 ಎಕರೆ ಜಾಗದಲ್ಲಿ ಶಿಕ್ಷಣ ಇಲಾಖೆಯೇ ಉತ್ತಮ ಯೋಜನೆ ಮಾಡಬೇಕು. ಇಲ್ಲವೇ ಪಂಚಾಯಿತಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿದರು. ಶಿಕ್ಷಣ ಇಲಾಖೆಗೆ ಈ ಕುರಿತು ಪತ್ರ ಬರೆಯುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಆಧಾರ್ ಕಡ್ಡಾಯವೇ? ಈ ಕುರಿತು ಗೊಂದಲಗಳಿವೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಆಧಾರ್ ಕಡ್ಡಾಯವಲ್ಲ, ಆದರೆ ಮುಂದೆ ವಿದ್ಯಾರ್ಥಿವೇತನ ಪಡೆಯುವ ಸಂದರ್ಭದಲ್ಲಿ ಆಧಾರ್ ಬೇಕಾಗುತ್ತದೆ. ಅದಕ್ಕೆ ದಾಖಲಾತಿ ಮಾಡುವಾಗಲೇ ಆಧಾರ್ ಪಡೆಯುತ್ತೇವೆ ಎಂದು ಪ್ರಸನ್ನ ಶೈಣೈ ಉತ್ತರಿಸಿದರು. ಬೆಳುವಾಯಿ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳಿಗೆ ಕಟ್ಟಡ ಒದಗಿಸುವಂತೆ ಮಾಜಿ ಅಧ್ಯಕ್ಷ ರಾಘು ಪೂಜಾರಿ ಆಗ್ರಹಿಸಿದರು.
ಪಶುವೈದ್ಯಾಧಿಕಾರಿಯವರ ಪ್ರಯತ್ನದಿಂದ ಬೆಳುವಾಯಿಯಲ್ಲಿ ಪಶುಚಿಕಿತ್ಸಾಲಯ ಆಗಿದೆ. ಆದರೆ ಅವರಿಗೆ ನಾಲ್ಕು ಕಡೆ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆಯಿವುದರಿಂದ ಬೆಳುವಾಯಿಗೆ ಶಾಶ್ವತ ಪಶುವೈದ್ಯಾಧಿಕಾರಿ ಬೇಕು ಎಂದು ಗ್ರಾಮಸ್ಥ ವಿಠಲ್ ಶಾಂತಿನಗರ ಒತ್ತಾಯಿಸಿದರು. ಪಶುವೈದ್ಯರ ನೇಮಕಾತಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಬೆಳುವಾಯಿಗೂ ಪಶು ವೈದ್ಯಾಧಿಕಾರಿಗಳ ನೇಮಕ ಆಗುವ ಸಾಧ್ಯತೆ ಇದೆ ಎಂದು ಪಶು ವೈದಾಧಿಕಾರಿ ರವಿ ಕುಮಾರ್ ತಿಳಿಸಿದರು.
ಅಧ್ಯಕ್ಷರು ಕಾರಣಾಂತರಗಳಿಂದ ಸದ್ಯ ಲಭ್ಯರಿಲ್ಲ. ಇದು ಪಂಚಾಯಿತಿ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಿದೆಯೇ? ಅದಕ್ಕೆ ಪರ್ಯಾಯ ವ್ಯವಸ್ಥೆ ಏನು? ಎಂದು ಗ್ರಾಮಸ್ಥ ವಿಜಯ್ ಪ್ರಶ್ನಿಸಿದರು. ಇದರಿಂದ ಕಾರ್ಯವೈಖರಿಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಬೀಮಾ ನಾಯ್ಕ್ ಉತ್ತರಿಸಿದರು. ಅವರು ಶೀಘ್ರ ಬರುತ್ತಾರೆ ಎಂದು ಭಾಸ್ಕರ ಆಚಾರ್ಯ ತಿಳಿಸಿದರು.
ನವಗ್ರಾಮದಲ್ಲಿ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಮೆಸ್ಕಾಂ ಸಿಬ್ಬಂದಿಯ ಸಹಕಾರ, ಕಡಿಮೆ ವಿದ್ಯುತ್ ವ್ಯತ್ಯಯ ಬಗ್ಗೆ ಗ್ರಾಮಸ್ಥರು ಶ್ಲಾಘಿಸಿದರು. ಕುಡಿಯುವ ನೀರಿನ ಅಭಾವವಿದಲ್ಲಿ ಆಧ್ಯತೆಯ ಮೇರೆಗೆ ಗ್ರಾಮಸ್ಥರಿಗೆ ಟ್ಯಾಂಕರ್ ಮುಖಾಂತರ ನೀಡು ಒದಗಿಸಲಾಗುವುದು ಎಂದು ಪಿಡಿಒ ಮಾಹಿತಿ ನೀಡಿದರು.
ತಾಲೂಕು ವಿಸ್ತರಣಾಧಿಕಾರಿ ಅರುಣ್ ಕುಮಾರ್ ನೋಡೆಲ್ ಅಧಿಕಾರಿಯಾಗಿದ್ದರು. ಜಿ.ಪಂ ಸದಸ್ಯೆ ಸುಜಾತ, ಪಂಚಾಯಿತಿ ಉಪಾಧ್ಯಕ್ಷೆ ರಮಣಿ ಆಳ್ವ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
