ಕುಪ್ಪೆಪದವು: ಲಿಂಗೈಕ್ಯರಾದ ಸಿದ್ದಲಿಂಗ ಸ್ವಾಮೀಜಿಯವರ ಸ್ಮರಣಾರ್ಥ ರಾಜ್ಯ ಸರಕಾರ ನಿನ್ನೆ ಒಂದು ದಿನದ ರಜೆ ಹಾಗೂ ಮೂರು ದಿನಗಳ ಶೋಕಾಚರಣೆಯ ನಡುವೆ ಭಾರತೀಯ ಕೃಷಿ ಸಂಶೋಧನಾ ಪರಿಷತ್ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕ್ಷೇತ್ರ ವಿಟ್ಲ ಮತ್ತು ಅಡಿಕೆ ಮತ್ತು ಸಾಂಬಾರಯ ಬೆಳೆಗಳ ನಿರ್ದೇಶನಾಲಯ ಕಲ್ಲಿಕೋಟೆ ಇದರ ಪ್ರಾಯೋಜಕತ್ವದಲ್ಲಿ ಅಡಿಕೆಯೊಂದಿಗೆ ಬಹುಬೆಳೆ ಕೃಷಿ ಪದ್ಧತಿ ಕುರಿತು ಕೃಷಿಕ್ಷೇತ್ರ ದಿನ ಮತ್ತು ಅಡಿಕೆ ಆರೋಗ್ಯ ನಿರ್ವಹಣೆಯ ಕುರಿತ ತರಬೇತಿ ಕಾರ್ಯಕ್ರಮವನ್ನು ಕುಪ್ಪೆಪದವಿನ ಗ್ರಾ.ಪಂ. ಕಚೇರಿ ಹಿಂಭಾಗದ ಕೊಡಮಣಿತ್ತಾಯ ಮೈದಾನದಲ್ಲಿ ನಡೆಸಿರುವುದು ರಾಜ್ಯ ಸರಕಾರದ ಶೋಕಾಚರಣೆಯ ಆದೇಶದ ಉಲ್ಲಂಘನೆಯಾಗಿದೆ ಎಂಬ ಮಾತುಗಳು ಕೇಳಿಬಂದಿದೆ.
ಸಿದ್ದಲಿಂಗ ಸ್ವಾಮೀಜಿವರು ಯಾವುದೇ ಒಂದು ವರ್ಗ, ಧರ್ಮಕ್ಕೆ ಸೀಮಿತವಾದವರಲ್ಲ. ಅವರೊಬ್ಬರು ರಾಷ್ಟ್ರೀಯ ಸಂತ. ಇವರ ಸ್ಮರಣಾರ್ಥ ಶೋಕಾಚರಣೆ ನಡೆಯುತ್ತಿದ್ದ ಸಂದರ್ಭ ಧ್ವನಿವರ್ಧಕವನ್ನು ಬಳಸಿ ಈ ಕಾರ್ಯಕ್ರಮ ನಡೆಸಿರುವುದು ಸಮಂಜಸವೇ? ಅಲ್ಲದೆ ಈ ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ, ಕುಪ್ಪೆಪದವು ಗ್ರಾ.ಪಂ. ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಹಾಗೂ ಮುತ್ತೂರು ಗ್ರಾ.ಪಂ. ನ ಕೆಲವು ಸದಸ್ಯರು ಕೂಡ ಭಾಗವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಾರ್ಯಕ್ರಮ ಆಯೋಜಿಸಿರುವುದು ಕೇಂದ್ರ ಸರಕಾರದ ಅಧೀನ ಸಂಸ್ಥೆಯಾಗಿದ್ದರೂ, ರಾಜ್ಯದ ಶೋಕಾಚರಣೆ ಆದೇಶ ಇವುಗಳಿಗೆ ಅನ್ವಯಿಸುವುದಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.
`ನಮ್ಮದು ಕೇಂದ್ರ ಸರಕಾರದ ಸಂಸ್ಥೆ. ನಮಗೆ ಯಾವುದೇ ಆದೇಶ ಬಂದಿಲ್ಲ. ಇಂದಿನಿಂದ ಒಂದು ತಿಂಗಳ ಮುಂಚೆಯೇ ಈ ಕಾರ್ಯಕ್ರಮಕ್ಕೆ ತಯಾರಿ ನಡೆಸಲಾಗಿತ್ತು. ರೈತರ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮ ರದ್ದುಪಡಿಸುವುದು ಸಮಂಜಸವಲ್ಲ ಎಂದು ನಿರ್ಧರಿಸಿ ಕಾರ್ಯಕ್ರಮ ನಡೆಸಿದ್ದೇವೆ. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸಿದ್ದಲಿಂಗ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾದಾಗಲೂ ನಮ್ಮ ಸಂಸ್ಥೆಗೆ ರಜೆ ಇರಲಿಲ್ಲ’ ಎಂದು ಕಾರ್ಯಕ್ರಮದ ಆಯೋಜಕರಾದ ಸಿ.ಪಿ.ಸಿ.ಆರ್.ಐ ವಿಜ್ಞಾನಿ ಡಾ| ನಾಗರಾಜ್ ಎನ್.ಆರ್. ಪತ್ರಿಕೆಗೆ ತಿಳಿಸಿದ್ದಾರೆ.

