ಗುರುಪುರ: ಬ್ರಿಟಿಷರ ಆಳ್ವಿಕೆ, ಪುರೋಹಿತಶಾಹಿ ನೀತಿ, ಸಾಮಾಜಿಕ ಸ್ಥಿತಿಗತಿ ಮುಂತಾದ ವ್ಯವಸ್ಥೆಗಳಿಂದ ಗುತ್ತು-ಬಾವ-ಬಾರಿಕೆ-ಪರಡಿ ವ್ಯವಸ್ಥೆ ಸೊರಗುತ್ತಾ ಬರುತ್ತಿದ್ದು, ಅದನ್ನು ಮತ್ತೆ ಆರಂಭಿಸಿ ಸತ್ಯ-ಧರ್ಮ-ನ್ಯಾಯ ವ್ಯವಸ್ಥೆ ಪುನಃಸ್ಥಾಪಿಸುವ ಉದ್ದೇಶದಿಂದ ಗುತ್ತು ನಿಮಗೆಷ್ಟು ಗೊತ್ತು ಎನ್ನುವ ಚಿಂಥನ ಮಂಥನ ಇಡಲಾಗಿದೆ. ಈ ವ್ಯವಸ್ಥೆ ಇಲ್ಲಿಂದಲ್ಲೇ ಹುಟ್ಟಿ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ನೆಮ್ಮದಿಯನ್ನು ನೀಡುವಂತಾಗಬೇಕು ಎಂದು ಗುರುಪುರ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಪ್ರಸಾದ್ ಶೆಟ್ಟಿ ಹೇಳಿದರು.

ಅವರು ಗುರುಪುರ ಗೋಳಿದಡಿ ಗುತ್ತಿನಲ್ಲಿ ನಡೆಯುತ್ತಿರುವ ವರ್ಸೊದ ಪರ್ಬೊದ ಅಂಗವಾಗಿ ಪರ್ಬೊದ ಸಿರಿಯಲ್ಲಿ ಗುತ್ತು ನಿಮಗೆಷ್ಟು ಗೊತ್ತು ಎನ್ನುವ ವಿಚಾರಗೋಷ್ಠಿಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿ ಈ ವಿಚಾರ ತಿಳಿಸಿದರು.
ಗುತ್ತು-ಬಾವ-ಬಾರಿಕೆ-ಪರಡಿ ವ್ಯವಸ್ಥೆಯನ್ನು ಪುನರಪಿ ಆರಂಭಿಸುವ ನಿಟ್ಟಿನಲ್ಲಿ ನನ್ನ ಗುರುಗಳಾದ ಕೆ.ಎಸ್ ನಿತ್ಯಾನಂದ ಅವರು ನನಗೆ ಆಜ್ಞೆ ಮಾಡಿದರು.
ಆರಂಭದಲ್ಲಿ ಈ ವ್ಯವಸ್ಥೆಯನ್ನು ಪುನರಪಿ ಸ್ಥಾಪಿಸಲು ಸಾಧ್ಯವೇ ಎಂಬ ಅಂಜಿಕೆ ಹುಟ್ಟಿತು. ಈ ಬಗ್ಗೆ ಅಧ್ಯಯನ ಮಾಡಿದಾಗ ಹಿಂದಿನ ನ್ಯಾಯ ವ್ಯವಸ್ಥೆ ಜನತೆಗೆ ನೆಮ್ಮದಿ ನೀಡುತ್ತಿತ್ತು ಎಂಬ ಸತ್ಯ ಗೊತ್ತಾಯಿತು. ಗೋಳಿದಡಿ ಗುತ್ತಿನ ಗಡಿ ಹಿಡಿದ ಬಳಿಕ ಎಲ್ಲಾ ಗುತ್ತು-ಬಾವ-ಬಾರಿಕೆ-ಪರಡಿಯವರನ್ನು ಒಟ್ಟು ಸೇರಿಸುತ್ತಿದ್ದೇವೆ. ಗಡಿಕಾರರಿಗೆ ದೀಕ್ಷೆ ಕೊಡಲಾಗುವುದು ಎಂದರು.

ಚಿಕ್ಕ ವಯಸ್ಸಿನಲ್ಲಿ ಗಡಿ ಹಿಡಿಯಬಾರದು, ಗಡಿ ಹಿಡಿದವರು ಧರ್ಮನೇಮ ಕೊಡಬೇಕು ಈ ರೀತಿ ಗಡಿಕಾರರ ಬಗ್ಗೆ ಕೆಲವೊಂದು ತಪ್ಪು ಕಲ್ಪನೆಗಳಿವೆ. ಅದೆಲ್ಲಾ ಹೋಗಬೇಕು. ಗಡಿಕಾರರಿಗೆ ಕೀಳರಿಮೆ ಇದ್ದು, ಇಂದು ದೈವದ ಕೊಡಿಯಡಿಗೆ ಬಂದು ಜೀಟಿಕೆ ಹಿಡಿಯುವಷ್ಟರ ಮಟ್ಟಿಗೆ ಸೀಮಿತರಾಗಿದ್ದಾರೆ. 40-45 ವಯಸ್ಸಿನಲ್ಲಿ ಗಡಿ ಹಿಡಿದು ಸಮಾಜಿಕ ನ್ಯಾಯ ವವಸ್ಥೆಗೆ ಕೊಡುಗೆ ಸಲ್ಲಿಸಲು ಎಲ್ಲ ಗಡಿಕಾರರು ಮುಂದಾಗಿ ಗಡಿ ಪಡೆದುಕೊಳ್ಳಬೇಕು. ತಿಮರೋಡಿ ಬೀಡನ ಮಹೇಶ್ ಶೆಟ್ಟಿ ತಿಮರೋಡಿ ಅವರು ದೀಕ್ಷೆ ಪಡೆದಿರುವುದು ನಿಜಕ್ಕೂ ಶ್ಲಾಘನೀಯ. ಅವರು ಮುಂದೆ ಧರ್ಮಾಧಿಕಾರಿಗಳಾಗಲಿದ್ದಾರೆ. ಈ ವ್ಯವಸ್ಥೆಯಿಂದ ಅಧಿಕಾರಿಗಳ ಶೋಷನೆ ಕಳೆದು ನ್ಯಾಯಬದ್ಧ ವ್ಯವಸ್ಥೆ ಬರಲಿದೆ. ಈ ವ್ಯವಸ್ಥೆಗೆ ಇಲ್ಲಿ ಬುನಾದಿ ಹಾಕಿದ್ದು, ಅದು ವ್ಯಾಪಕವಾಗಲಿ ಎಂದು ನುಡಿದರು.

ಅಜಿತ್ ಕುಮಾರ್ ಮಾಲಾಡಿ ಅವರು ಮಾತಾಡಿ, ಕೊಡಿಯಾಲ್ ಗುತ್ತಿನ ಒಂದನೇ ಮನೆತನ ನಮ್ಮದಾಗಿದ್ದರೂ ಅದನ್ನು ನಮ್ಮನ್ನು ಮುಂದೆ ತರಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ವ್ಯವಸ್ಥೆಯನ್ನು ತರಲು ಸಾಧ್ಯವಾಗದಿದ್ದರೂ ಕೆಲವೊಂದನ್ನಾದರೂ ಉಳಿಸೋಣ. ಸಂಸ್ಕøತಿ ಉಳಿಸೋಣ, ಕೃಷಿ ವ್ಯವಸ್ಥೆಯನ್ನು ಮತ್ತೆ ತರೋಣ ಎಂದು ನುಡಿದರು. ಗುರುರಾಜ ಮಾಡ ಈ ವೇಳೆ ಮಾತನಾಡಿದರು. ಕೆ.ಎಸ್. ನಿತ್ಯಾನಂದ ಅವರು ಉಪಸ್ಥಿತರಿದ್ದರು.


