ಬಂಟ್ವಾಳ:ಇಲ್ಲಿನ ವಾಮದಪದವು ಸಮೀಪದ ಚೆನ್ನೈತ್ತೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ 22ರಂದು ಶತಮಾನೋತ್ಸವ ಸಂಭ್ರಮಾಚರಣೆ ಮತ್ತು ನೂತನ ಭೋಜನಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಂಝ ಬಸ್ತಿಕೋಡಿ ಹೇಳಿದ್ದಾರೆ.ಚೆನ್ನೈತ್ತೋಡಿ ಶಾಲೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 1918ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಬಳಿಕ ಹಿರಿಯ ಮತ್ತು ಉನ್ನತೀಕರಿಸಿದ ಶಾಲೆಯಾಗಿ ಪ್ರಗತಿ ಕಂಡಿದೆ ಎಂದರು.

ಪ್ರಸಕ್ತ ಒಟ್ಟು 294 ಮಂದಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಒಟ್ಟು 12 ಮಂದಿ ಶಿಕ್ಷಕರಿದ್ದಾರೆ. ಈ ನಡುವೆ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಕಳೆದ ವರ್ಷ ಹೆಚ್ಚುವರಿಯಾಗಿ ಮೂವರು ಶಿಕ್ಷರನ್ನು ನಿಯೋಜಿಸಲಾಗಿದ್ದು, ಎಲ್ಕೆಜಿ ಮತ್ತು ಯುಕೆಜಿ ಶಿಕ್ಷಣ ಆರಂಭಿಸಲಾಗಿದೆ. ಮುಖ್ಯಶಿಕ್ಷಕರು ಸಹಿತ ಒಟ್ಟು ನಾಲ್ಕು ಮಂದಿ ಶಿಕ್ಷಕರ ಕೊರತೆ ಇದೆ ಎಂದು ಅವರು ತಿಳಿಸಿದರು. ಶತಮಾನೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ರೂ 10ಲಕ್ಷ ವೆಚ್ಚದಲ್ಲಿ ಭೋಜನಾಲಯ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿನ ಹಳೆಯ ಮಣ್ಣಿನ ಗೋಡೆ ಕಟ್ಟಡಕ್ಕೆ ಬದಲಾಗಿ ಸುಸಜ್ಜಿತ ಕಟ್ಟಡ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಇದೇ 22ರಂದು ಬೆಳಿಗ್ಗೆ ಗಂಟೆ 10.15ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೋಜನಾಲಯ ಉದ್ಘಾಟಿಸಲಿದ್ದು, ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಗುರುವಂದನೆ, ಸಾಧಕರಿಗೆ ಸನ್ಮಾನ, ನಾಟಕ, ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಡೇನಿಸ್ ಫೆರ್ನಾಂಡಿಸ್, ಸಂಚಾಲಕ ನಾರಾಯಣ ಶೆಟ್ಟಿ, ಸುದ್ದಿಗೋಷ್ಠಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಆಚಾರ್ಯ ಹರ್ಕಾಡಿ, ಪ್ರಭಾರ ಮುಖ್ಯಶಿಕ್ಷಕಿ ಜಾನೆಟ್ ಕೊನ್ಸೆಸೊ, ಪ್ರಮುಖರಾದ ಸಿ.ಅನಂತ ಪೈ, ಸಿ.ಶ್ರೀಧರ ಪೈ, ಗೋಪಾಲ ಅಂಚನ್, ನವೀನಚಂದ್ರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಪ್ರಕಾಶ ಗಟ್ಟಿ, ಸುನಿಲ್ ದಪ್ಪರಬೈಲು ಮತ್ತಿತರರು ಇದ್ದರು.
