ಬಂಟ್ವಾಳ: ಮಕ್ಕಳ ಕೊರತೆಯಿಂದ ಮುಚ್ಚುತ್ತಿದ್ದ ಸರಕಾರಿ ಶಾಲೆಯನ್ನು ಸಮುದಾಯದ ಸಹಕಾರದೊಂದಿಗೆ ಉಳಿಸಿ ಬೆಳೆಸಿ ರಾಜ್ಯದಲ್ಲಿಯೇ ಶೈಕ್ಷಣಿಕ ಕ್ರಾಂತಿಗೆ ಮುನ್ನಡಿ ಬರೆದ ಬಂಟ್ವಾಳ ತಾಲೂಕಿನ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ದತ್ತು ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಸದಸ್ಯರು ರಾತ್ರಿ ಹಗಲೆನ್ನದೆ ಶಾಲಾ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣಾಭಿಮಾನಿ ಸಂಘ ಸಂಸ್ಥೆಗಳು ಕೂಡ ತಮ್ಮ ಶ್ರಮಾದಾನದ ಸೇವೆಯನ್ನು ನೀಡುತ್ತಿದ್ದು ಮುಂದಿನ ತಿಂಗಳು ಜನವರಿ 5ರಂದು ಶನಿವಾರ ಸಂಜೆ ಕರ್ನಾಟಕ ರಾಜ್ಯಪಾಲ ವಜೂಬಾಯಿ ವಾಲಾ ಅವರಿಂದ ಲೋಕಾರ್ಪಣೆಗೊಳ್ಳಲಿದೆ.
ರಾಜ್ಯದಲ್ಲಿಯೇ ಮೊದಲ ಸುಸಜ್ಜಿತ ಕಟ್ಟಡ:
ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿ ಶಾಲೆಯನ್ನು ಉಳಿಸಿದ್ದು ಮಾತ್ರವಲ್ಲದೆ ದತ್ತು ಸಂಸ್ಥೆಯೊಂದು ಸರಕಾರದ ನಯಾಪೈಸೆ ಅನುದಾನ ಪಡೆಯದೆ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡವನ್ನು ಸರಕಾರಿ ಶಾಲೆಯೊಂದಕ್ಕೆ ನಿರ್ಮಿಸಿ ಕೊಟ್ಟಿರುವುದು ರಾಜ್ಯದಲ್ಲೇ ಪ್ರಥಮ. ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ದಡ್ಡಲಕಾಡು ಶಾಲೆಯನ್ನು ದತ್ತು ಸ್ವೀಕರಿಸಿದ ಬಳಿಕ ಹಂತ ಹಂತವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾದ ಕಾರಣ ಹೊಸ ಕಟ್ಟಡ ನಿರ್ಮಾಣದ ಅನಿವಾರ್ಯತೆ ಉಂಟಾಯಿತು. ಅದರಂತೆ ಸುಮಾರು 1.20 ಕೋಟಿ ರುಪಾಯಿ ವೆಚ್ಚದಲ್ಲಿ ದಾನಿಗಳ ನೆರವು ಪಡೆದುಕೊಂಡು 8 ಕೊಠಡಿಗಳ ಮೊದಲ ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದು 2017 ಮೇ 22ರಂದು ಕೇಂದ್ರದ ಅಂಕಿ ಅಂಶಗಳ ಖಾತೆ ಸಚಿವರಾಗಿದ್ದ ದಿ. ಅನಂತ ಕುಮಾರ್ ಅವರು ಉದ್ಘಾಟಿಸಿದ್ದರು. ಬಳಿಕ ಮತ್ತೆ ವಿದ್ಯಾರ್ಥಿಗಳ ದಾಖಲಾತಿ ಅಧಿಕ ಗೊಂಡಿದ್ದು ಎಲ್ಲಾ ವಿದ್ಯಾರ್ಥಿಗಳು ಒಂದೇ ಕಟ್ಟಡದಲ್ಲಿ ವಿದ್ಯಭ್ಯಾಸ ಪಡೆಯುವ ನಿಟ್ಟಿನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ 16 ಹೆಚ್ಚುವರಿ ಕೊಠಡಿಗಳ ಮೇಲಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿದ್ದು ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿದೆ. ಹೊಸ ಕಟ್ಟಡಕ್ಕೆ ತಾಗಿಕೊಂಡೇ 11 ಕೊಠಡಿಗಳ ಮತ್ತೊಂದು ಕಟ್ಟಡ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ.
ರಾಜ್ಯಪಾಲರಿಂದ ಲೋಕಾರ್ಪಣೆ:

ಕರ್ನಾಟಕ ರಾಜ್ಯಪಾಲ ವಜೂಬಾಯಿ ವಾಲಾ ಅವರು ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲಂತಸ್ತಿನ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಇದ್ದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ನಿಯೋಗ ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಶುಕ್ರವಾರ ಭೇಟಿಯಾಗಿ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದೆ. ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಮುಂದಿನ ಜನವರಿ 5ರಂದು ಮೇಲಂತಸ್ತಿನ ಕಟ್ಟಡದ ಉದ್ಘಾಟನೆ ಆಗಮಿಸುವುದಾಗಿ ಒಪ್ಪಿಕೊಂಡಿದ್ದಾರೆ. ಈ ಸಂದರ್ಭ ಕೇಂದ್ರದ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ದುರ್ಗಾ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಕಾಶ್ ಅಂಚನ್, ಸದಸ್ಯರಾದ ಪುರುಷೋತ್ತಮ ಅಂಚನ್, ದೀಪಕ್ ಸಾಲ್ಯಾನ್, ದಡ್ಡಲಕಾಡು ಸರಕಾರಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ ಹಾಜರಿದ್ದರು. ಉದ್ಘಾಟನಾ ಸಮಾರಂಭಕ್ಕೆ ರಾಜ್ಯಪಾಳರು ಆಗಮಿಸುತ್ತಿರುವುದು ಶ್ರಿ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ಸದಸ್ಯರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮಾತ್ರವಲ್ಲದೆ ಬಂಟ್ವಾಳ ತಾಲೂಕಿಗೆ ರಾಜ್ಯಪಾಲರ ಮೊದಲ ಭೇಟಿಯಾಗಿದೆ.
