ಕೈಕಂಬ: ಶಿಕ್ಷಕರು ಮಕ್ಕಳಿಗೆ ಸಂಸ್ಕಾರ, ಜೀವನ ಮೌಲ್ಯಗಳನ್ನು ಕಲಿಸಿ, ಅವರು ಸಾಧನೆ ಮಾಡುವಂತೆ ಉತ್ತೇಜಿಸುವುದರಿಂದ ಇಂದು ಹಲವಾರು ಮಂದಿ ಸಾಧನೆ ಮಾಡಲು ಸಾಧ್ಯವಾಗಿದೆ. ಆದರೆ ಇಂದು ಮಕ್ಕಳಿಗೆ ಮನೆಕೆಲಸ ಕೊಡಬಾರದು, ಪರೀಕ್ಷೆ ನೀಡಬಾರದು ಎನ್ನುವ ನಿರ್ಧಾರಕ್ಕೆ ಸರಕಾರ ಮುಂದಾಗಿದೆ. ಪುಸ್ತಕಗಳನ್ನು ಇಂತಿಷ್ಟೇ ಕೆ.ಜಿ.ಲೆಕ್ಕದಲ್ಲಿ ಕೊಡಬೇಕೆಂದು ಹೇಳುವವರು ಇನ್ನು ಶಿಕ್ಷಣವನ್ನೂ ಕೆ.ಜಿ. ಲೆಕ್ಕದಲ್ಲಿ ಕಲಿಸುವ ಪ್ರಮೇಯವೂ ಮುಂದೆ ಬರಬಹುದು. ಈ ರೀತಿ ಆದರೆ ಮಕ್ಕಳ ಹಾಗೂ ದೇಶದ ಭವಿಷ್ಯವೇನಾಗಬಹುದು? ಎಂದು ಪೊಂಪೈ ಚರ್ಚ್ ಗುರುಪುರ ಕೈಕಂಬ ಇದರ ಧರ್ಮಗುರುಗಳಾದ ವಂದನೀಯ ಫಾದರ್ ಆಂಟನಿ ಲೋಬೋ ಖೇದ ವ್ಯಕ್ತಪಡಿಸಿದರು. ಅವರು ಗುರುಪುರ ಕೈಕಂಬ ಸಮೀಪದ ರೋಸಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ ಇಲ್ಲಿನ `ವಜ್ರಮಹೋತ್ಸವ ಸಂಭ್ರಮ’ದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಬೆಥನಿ ಮಂಗಳೂರು ಪ್ರಾಂತ್ಯ ಹಾಗೂ ಕಾರ್ಪೊರೇಟ್ ಮೆನೇಜರ್ ಬೆಥನಿ ವಿದ್ಯಾಸಂಸ್ಥೆ ಇದರ ಪ್ರಾಂತ್ಯಧಿಕಾರಿಣಿ ವಂ. ಭಗಿನಿ ಸಿಸಿಲಿಯಾ ಮೆಂಡೋನ್ಸಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಕ್ಷಣಾಧಿಕಾರಿಯಾಗಿರುವ ವಿಷ್ಣು ಹೆಬ್ಬಾರ್ ಮಾತನಾಡಿ, ಈ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ವ್ಯಕ್ತಿತ್ವ ಹಾಗೂ ಸಾಧನೆಗೆ ಪೂರಕವಾಗುವ ರೀತಿಯಲ್ಲಿ ವಿದ್ಯಾರ್ಜನೆ ನೀಡಲಾಗುತ್ತಿದೆ. ಇದಕ್ಕೆ ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಸಾಧನೆ ಮಾಡಿರುವ ಹಳೆ ವಿದ್ಯಾರ್ಥಿಗಳೇ ಸಾಕ್ಷಿ ಎಂದು ನುಡಿದರು. ರೋಸಾಮಿಸ್ತಿಕಾ ಸುಪೀರಿಯರ್ ಭಗಿನಿ ಜೂಲಿಯಾನಾ ಮೊನಿಸ್ ವಿದ್ಯಾರ್ಥಿಗಳ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸಿದರು.
ಶಾಲೆಯ ಹಳೆ ವಿದ್ಯಾರ್ಥಿ, ಸೈಂಟ್ ಆನ್ಸ್ ಪ್ರೊವಿಡೆನ್ಸ್ ಮಂಗಳೂರು ಇದರ ಪ್ರಾಂತ್ಯಾಧಿಕಾರಿಣಿ ವಂ. ಭಗಿನಿ ಡಾ. ಶಾಲೆಟ್ ಸಿಕ್ವೇರಾ ಮಾತನಾಡಿ ನಾನು ಕೂಡಾ ಇಲ್ಲಿ ವಿದ್ಯಾರ್ಜನೆ ಪಡೆದಿರುವುದು ಹೆಮ್ಮೆ ಎನಿಸುತ್ತಿದೆ. 60 ವರ್ಷಗಳ ಕಾಲ ಶಿಕ್ಷಣ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ನುಡಿದರು. ರೋಸಾ ಮಿಸ್ತಿಕಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ನವೀನ್ ಆಚಾರ್ಯ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಇದು ಅವರ ವ್ಯಕ್ತಿತ್ವಕ್ಕೆ ಪೂರಕ ಎನಿಸುತ್ತದೆ ಎಂದು ತಿಳಿಸಿದರು.
ಮೂಳೂರು ಪಂಚಾಯತ್ ಅಧ್ಯಕ್ಷೆ ರುಕಿಯಾ, ಮಾಜಿ ಮೇಯರ್ ಜೆಸಿಂತಾ ವಿಜಯಾ ಅಲ್ಫ್ರೇಡ್, ಎಂಸಿಸಿ ಬ್ಯಾಂಕ್‍ನ ಜನರಲ್ ಮೆನೇಜರ್, ಹಳೆ ವಿದ್ಯಾರ್ಥಿ ಸುನಿಲ್ ಮಿನೇಜಸ್, ಕನ್ಸೆಟ್ಟಾ ಬಿ.ಎಸ್., ವಿಲ್ಫ್ರೆಡ್ ಪಿಂಟೋ, ಜ್ಯೂತಿ ಲೂಯಿಸ್ ಉಪಸ್ಥಿತರಿದ್ದರು. ನಾನಾ ಸ್ಪರ್ಧೆ, ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ನಿವೃತ್ತ ಶಿಕ್ಷಕರು, ಶಾಲೆಗಾಗಿ ದುಡಿದ ವ್ಯಕ್ತಿಗಳನ್ನು ಗೌರವಿಸಲಾಯಿತು. ಥ್ರೋಬಾಲ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ವಿಶೇಷ ರೀತಿಯಲ್ಲಿ ಗೌರವಿಸಲಾಯಿತು. ಸಿಸ್ಟರ್ ಲೀಸಾ ಸ್ವಾಗತಿಸಿದರು. ಶ್ಯಾಮಲಾ ಹಾಗೂ ಮೋಹಿನಿ, ದೈಹಿಕ ಶಿಕ್ಷಕ ಲ್ಯಾನ್ಸಿ ಸಿಕ್ವೇರಾ ನಿರೂಪಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು.
ಥ್ರೋಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
