ಕೈಕಂಬ: ಕೈಕಂಬ ಮೆಸ್ಕಾಂನ ಉಪ ವಿಭಾಗದ ಜನ ಸಂಪರ್ಕ ಸಭೆಯು ಗುರುಪುರ ಕೈಕಂಬದ ಮೆಗಾಫ್ಲಾಝಾದಲ್ಲಿ ನಡೆಯಿತು. ಸೀಮಿತ ಸಂಖ್ಯೆಯಲ್ಲಿ ಹಾಜರಿದ್ದ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಎಕ್ಸಿಕ್ಯೂಟಿವ್ ಇಂಜಿನಿಯರ್ ಸತೀಶ್ಚಂದ್ರ ಅವರಲ್ಲಿ ತೋಡಿಕೊಂಡರು.
ಈ ವೇಳೆ ಮೆಸ್ಕಾಂ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಗಂಜಿಮಠ ಗ್ರಾ. ಪಂ ಅಧ್ಯಕ್ಷೆ ಮಾಲತಿ ಅವರು, ಗಂಜಿಮಠದ ಪಂಪ್ಹೌಸ್ನಲ್ಲಿ ಅನಾಹುತ ಸಂಭವಿಸಿದ್ದಲ್ಲದೆ, ಇಲ್ಲಿನ ಅಮರನಾಥ್ ಎಂಬವರ ಮನೆಗೆ ಬೆಂಕಿ ಅನಾಹುತ ಸಂಭವಿಸಿ ಎರಡು ವರ್ಷ ಕಳೆದರೂ ಇನ್ನೂ ನಷ್ಟ ಪರಿಹಾರ ಸಿಕ್ಕಿಲ್ಲ. ಕಳೆದ ಬಾರಿಯ ಸಭೆಯಲ್ಲೂ ಪ್ರಸ್ತಾಪಿಸಲಾಗಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು. ಪ್ರತ್ಯೇಕ ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ ಪಡೆಯಲು ಪಂಚಾಯತ್ ವತಿಯಿಂದ 2 ಲಕ್ಷ ರೂ. ಹಣ ಪಾವತಿಸಿದ್ದರೂ ಇನ್ನೂ ಸಂಪರ್ಕ ಕಲ್ಪಿಸಲಾಗಿಲ್ಲ. ಕೂಡಲೇ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಕಾಜಿಲದ ಸದಾಶಿವ ಅವರು ಮಾತನಾಡಿ, ವ್ಯಾಜ್ಯವಿದ್ದ ಜಾಗವನ್ನು ಮಾರಲಾಗಿದ್ದು, ಮಾರಾಟ ಮಾಡಿದ ನಂತರ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೀರಿ. ನೀವು ಯಾವ ದಾಖಲೆಗಳ ಆಧಾರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಮಾಲಕತ್ವದ ವಿಚಾರದಲ್ಲಿ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿರುವ ಸಂದರ್ಭದಲ್ಲಿ ಮರದ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಅಕ್ರಮವಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೋರ್ಟ್ ನೀಡಿದ ಆದೇಶ ಪ್ರತಿಯನ್ನು ಕೇಳಿದಾಗ ಮೆಸ್ಕಾಂ ಸಿಬ್ಬಂದಿ ನೀಡಲು ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಇರುವ ಪಂಪ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾದಾಗ ಉತ್ತರ ನೀಡಿದ ಕೈಕಂಬ ಮೆಸ್ಕಾಂ ಅಸಿಸ್ಟೆಂಟ್ ತಿಮ್ಮಪ್ಪ ಗೌಡ, ಆಯಾಯ ಪಂಚಾಯತ್ ವ್ಯಾಪ್ತಿಯಲ್ಲಿರುವ ನಿರುಪಯುಕ್ತ ಪಂಪ್ಗಳ ವಿದ್ಯುತ್ ಕಡಿತಗೊಳಿಸುವ ಬಗ್ಗೆ ಗ್ರಾ.ಪಂ.ಗಳು ಬರಹ ಮೂಲಕ ವಿನಂತಿಸಿದರೆ ಅವುಗಳ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ವಿನಂತಿಸಿದರು.
ಮುತ್ತೂರು ಗ್ರಾ.ಪಂ. ವ್ಯಾಪ್ತಿಯ ತೇರೆಜಾಲು ಧೂಮಾವತಿ ದೈವಸ್ಥಾನದ ಮಾರಿಗುಡಿಯ ಕಲ್ಲಿನ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದು, ಜಾತ್ರೆಯ ಸಂದರ್ಭ ಇದರಿಂದ ಅನಾಹುತ ಆಗುವ ಸಾಧ್ಯತೆ ಇದೆ. ಇವುಗನ್ನು ಅಲ್ಲಿಂದ ಸ್ಥಳಾಂತರಿಸುವಂತೆ ದೈವಸ್ಥಾನದ ವತಿಯಿಂದ ಮನವಿ ಸಲ್ಲಿಸಲಾಯಿತು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕೈಕಂಬ ಉಪ ವಿಭಾಗದಲ್ಲಿ ನಡೆದ ವಿವಿಧ ಕಾಮಗಾರಿಗಳ ಹಾಗೂ ಹಳೆ ತಂತಿ ಬದಲಾವಣೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಗ್ರಾಹಕರು ತಮ್ಮ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವಿ ನೀಡಿದರು.
ಕುಪ್ಪೆಪದವು ತಾ. ಪಂ. ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಎಡಪದವು ಗ್ರಾ.ಪಂ ಮಾಲತಿ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಹಕರು, ಮೆಸ್ಕಾಂ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.
