ಮೂಡುಬಿದಿರೆ: ವೃತ್ತಿರಂಗದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಬಲಗೊಳಿಸುವ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳಿಗೆ ಕಾಯಕ ಯೋಜನೆಯಡಿ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ಹಾಗೂ ಪುರುಷರನ್ನೊಳಗೊಂಡ ಸಂಘಗಳಿಗೆ ಶೇ. 4ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಅವಿಭಜಿತ ದ.ಕ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯಾಗದಿರುವುದಕ್ಕೆ ಸಹಕಾರಿ ಸಂಸ್ಥೆಗಳು ಸದೃಢವಾಗಿರುವುದೇ ಕಾರಣವಾಗಿದೆ ಎಂದು ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಲ, ದ.ಕ ಜಿಲ್ಲಾ ಸಹಕಾರಿ ಯೂನಿಯನ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಆಶ್ರಯದಲ್ಲಿ ಕೆಸರಗದ್ದೆ ಶಾಖಾ ಆವರಣದಲ್ಲಿ ಸೋಮವಾರ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಧ್ವಜಾರೋಹಣ ನೆರವೇರಿಸಿದ ದ.ಕ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷ ಹರೀಶ್ ಆಚಾರ್ಯ ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯಲ್ಲಿ ಇತ್ತೀಚೆಗಿನ ದಶಕಗಳಲ್ಲಿ ಸಹಕಾರಿ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿರುವುದರ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ಅವರ ಶ್ರಮ ಅಪಾರವಾಗಿದೆ. ದ.ಕ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಎಂ.ಎನ್ ರಾಜೇಂದ್ರ ಕುಮಾರ್ ಮುಂದಿನ ಜನವರಿಗೆ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ದೊಡ್ಡ ಮಟ್ಟದ ಸಹಕಾರ ಸಮಾವೇಶವನ್ನು ಆಯೋಜಿಸಿರುವುದಾಗಿ ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ ಸಹಕಾರಿ ಸಂಸ್ಥೆಗಳು ಕೃಷಿಕರಿಗೆ ಸಾಲಸೌಲಭ್ಯ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದು ನೀಡಿದ ಸಾಲಗಳಿಗೆ ಇನ್ಸೂರೆನ್ಸ್ ಭದ್ರತೆಯನ್ನು ನೀಡುವ ವ್ಯವಸ್ಥೆ ಕಲ್ಪಿಸಿದರೆ ಮತ್ತಷ್ಟು ಪ್ರಯೋಜನವಾದೀತು ಎಂದರು. ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಭಾಸ್ಕರ ಎನ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ನ ನಿರ್ದೇಶಕ ಬಾಹುಬಲಿ ಪ್ರಸಾದ್, ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಆಚಾರ್ಯ, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ ಸಲೀಂ ಭಾಗವಹಿಸಿದರು.
ಈ ವೇಳೇಯಲ್ಲಿ ಬಹುಪಯೋಗಿ ವಾಹನವನ್ನು ಲೋಕಾರ್ಪಣೆಗೊಳಿಸಲಾಯಿತು. ಡಾ. ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಉಮಾನಾಥ ಕೋಟ್ಯಾನ್ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕ್ನ ಹಿರಿಯ ಸದಸ್ಯರಾದ ನೇಮಿರಾಜ ಹೆಗ್ಡೆ, ಲಕ್ಷ್ಮೀ ನಾರಾಯಣ ಉಪಾಧ್ಯಾಯ, ಪೀರ್ಬಾನ್ ಸಹೇಬ್, ಗಿರಿಜ ಭಟ್, ಇಗ್ನೇಶಿಯಸ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು,
ನವೋದಯ ಸ್ವಸಹಾಯ ಗುಂಪಿನ ಅತ್ಯುತ್ತಮ ಗುಂಪುಗಳನ್ನು ಹಾಗೂ ನವೋದಯ ಚಾರಿಟೇಬಲ್ ಟ್ರಸ್ಟ್ನ ಉತ್ತಮ ಪ್ರೇರಕಿಯರನ್ನು ಗೌರವಿಸಲಾಯಿತು. ಹಾಗೂ ಮೂಡುಬಿದಿರೆ ಸಹಕಾರಿ ತರಬೇತಿ ಕೇಂದ್ರಕ್ಕೆ ಶಿಕ್ಷಣ ನಿಧಿಗಾಗಿ 2.78 ಲಕ್ಷ ರೂಗಳ ಚೆಕ್ನ್ನು ಹಸ್ತಾಂತರಿಸಲಾಯಿತು. ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕಿ ಬಿಂದು ನಾಯಕ್ ಉಪನ್ಯಾಸ ನೀಡಿದರು. ಸಂಘದ ಉಪಾಧ್ಯಕ್ಷ ವಸಂತ ಶೆಟ್ಟಿ, ಮೂಡುಬಿದಿರೆ ಎಂಸಿಎಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ., ಸಂಘದ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುರೇಶ್ ರಾವ್ ಸ್ವಾಗತಿಸಿದರು. ಲೆಕ್ಕಾಧಿಕಾರಿ ನಯನ ಹೆಗ್ಡೆ ವರದಿ ವಾಚಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು. ಎಸ್ಸಿಡಿಸಿಸಿ ಬ್ಯಾಂಕ್ನ ಪ್ರತಿನಿಧಿ ಸಂಜಯ ಅಧಿಕಾರಿ ವಂದಿಸಿದರು.
