ಮೂಡುಬಿದಿರೆ: ಸಹಕಾರ ಎನ್ನುವುದು ಭಾರತೀಯರ ಸಾಂಪ್ರಾದಾಯ. ದೇಶದಲ್ಲಿ ಈ ವ್ಯವಸ್ಥೆ ಬರುವ ಮೊದಲೆ ಹಳ್ಳಿಯ ಕೃಷಿ ಕ್ಷೇತ್ರದಲ್ಲಿ ಸಹಕಾರ ಪದ್ದತಿ ಜಾರಿಯಲ್ಲಿತ್ತು ಎಂದು ಸಹಕಾರಿ ಭಾರತಿ ಮಂಗಳೂರು ಇದರ ದ.ಕ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಹೇಳಿದರು.
ಸಹಕಾರಿ ಸಪ್ತಾಹದ ಅಂಗವಾಗಿ ಸಹಕಾರಿ ಭಾರತಿ ಮಂಗಳೂರು ಗ್ರಾಮಾಂತರ ವತಿಯಿಂದ ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮಂಗಳವಾರ ಕೃಷಿ ಸಹಕಾರ ಸಂಘ, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು ಮತ್ತು ಸಿಬಂದಿಗಳಿಗೆ ನಡೆದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ರಂಗ ಗ್ರಾಮದ ಅಭಿವೃದ್ಧಿಯ ಚಿಂತನೆಯ ಜೊತೆಗೆ ದೇಶದ ಪ್ರಗತಿಯ ಚಿಂತನೆಯನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವುದರಿಂದ ಮಹಾತ್ಮ ಗಾಂಧಿಯ ರಾಮರಾಜ್ಯದ ಕನಸು ಸಾಕಾರಗೊಳಿಸುವಲ್ಲಿ ಶ್ರಮಿಸುತ್ತಿದೆ ಎಂದರು.
ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಮಾತನಾಡಿ, ಸ್ಥಳೀಯವಾಗಿ ಬೇಕಾದ ಮೂಲ ಸೌಕರ್ಯಗಳು ದೊರೆತರೆ ಗ್ರಾಮದ ಅಭಿವೃದ್ಧಿ ಸಾಧ್ಯ. ಸಹಕಾರಿ ಚಳುವಳಿಯ ಉದ್ದೇಶ ಕೂಡ ಇದೇ ಆಗಿದೆ. ಸಹಕಾರಿ ಬಂಧುಗಳು ಒಗ್ಗಟ್ಟಾಗಿ ಸವಲತ್ತುಗಳನ್ನು ಪಡೆಯಲು ನೆರವಾಗುವಲ್ಲಿ ಸಹಕಾರಿ ಸಂಘ, ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಸಹಕಾರಿ ಭಾರತಿ ಮಂಗಳೂರು ಇದರ ಅಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ದ.ಕ ಜಿಲ್ಲಾ ಕೆಎಂಎಪ್ ಉಪಾಧ್ಯಕ್ಷ ಸುಚರಿತ ಶೆಟ್ಟಿ, ಹಿರಿಯ ವಕೀಲ ಎಂ.ಎಸ್ ಕೋಟ್ಯಾನ್, ತಾಕೋಡೆ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಜೆರಾಲ್ಡ್ ಮೆಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಕೆಎಂಎಪ್ ನಿರ್ದೇಶಕ ಡಾ.ಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಕೃಷ್ಣ ಕೊಂಪದವು ಸ್ವಾಗತಿಸಿದರು. ಕಾರ್ಯಕ್ರಮವನ್ನು ಚೇತನ್ ನಿರೂಪಿಸಿದರು.

