ಬಂಟ್ವಾಳ : ತಾಲ್ಲೂಕಿನ ಇರ್ವತ್ತೂರು ಗ್ರಾಮದ ಮಣ್ಣೂರು ಎಂಬಲ್ಲಿ ಕಳೆದ ಬುಧವಾರ ಬೆಳಿಗ್ಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿ ಶ್ರದ್ಧಾ (13) ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಸ್ಥಳೀಯರು ಇದೊಂದು ವ್ಯವಸ್ಥಿತ ಕೊಲೆಯಾಗಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಪೊಲೀಸರಿಗೆ ಶನಿವಾರ ದೂರು ಸಲ್ಲಿಸಿದ್ದಾರೆ.
ಇಲ್ಲಿನ ನಿವಾಸಿ ಚಂದ್ರ ಪೂಜಾರಿ ಎಂಬವರ ಇಬ್ಬರು ಪುತ್ರಿಯರ ಪೈಕಿ ಶ್ರದ್ಧಾ ಎಂಬಾಕೆ ಪುಂಜಾಲಕಟ್ಟೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಈಕೆ ಮಂಗಳವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ಮನೆಯವರೊಂದಿಗೆ ಮಲಗಿದ್ದು, ಬುಧವಾರ ಬೆಳಿಗ್ಗೆ ಮನೆ ಸಮೀಪದ ವ್ಯಕ್ತಿಯೊಬ್ಬರ ಮಾವಿಯಲ್ಲಿ ಈಕೆಯ ಮೃತ ದೇಹ ಪತ್ತೆಯಾಗಿತ್ತು. ಈ ಸಾವಿನ ಹಿಂದೆ ಸ್ಥಳೀಯ ವ್ಯಕ್ತಿಯೊಬ್ಬರ ಕೈವಾಡ ಇರುವ ಸಾಧ್ಯತೆಯಿದ್ದು, ಇದನ್ನು ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಅದೇ ದಿನ ಪುಂಜಾಲಕಟ್ಟೆ ಠಾಣೆ ಪೊಲೀಸರಿಗೆ ಆಗ್ರಹಿಸಿದ್ದರು.
ಇದೀಗ ಸ್ಥಳೀಯರು ಒಟ್ಟಾಗಿ ಇದು ಆತ್ಮಹತ್ಯೆ ಅಲ್ಲ. ಇದೊಂದು ವ್ಯವಸ್ಥಿತ ಕೊಲೆಯಾಗಿದ್ದು, ಇದರ ಸತ್ಯಾಸತ್ಯತೆ ಬಗ್ಗೆ ಕೂಡಲೇ ಪೊಲೀಸು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬೆಳ್ತಂಗಡಿ ಇನ್ಸ್ಪೆಕ್ಟರ್ ಸಂದೇಶ್ ಅವರಿಗೆ ಶನಿವಾರ ದೂರು ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ನಿಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ ಕುಡ್ಮೇರು, ಗ್ರಾಮ ಪಂಚಾಯಿತಿ ಸದಸ್ಯ ದಯಾನಂದ ಕುಲಾಲ್ ಮತ್ತಿತರರು ಇದ್ದರು.
