ಕೈಕಂಬ: ಮದರಸ ವಿದ್ಯಾರ್ಥಿಗಳ ಐಡಿ ಕಾರ್ಡ್ ಧರಿಸುವ ವಿಚಾರದಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದು, ಎರಡೂ ತಂಡಗಳ ಒಬ್ಬೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಕುಪ್ಪೆಪದವಿನಲ್ಲಿ ನಡೆದಿದೆ.ಕುಪ್ಪೆಪದವು ನಿವಾಸಿಗಳಾದ ಅಬ್ದುಲ್ ರಝಾಕ್ ಹಾಗೂ ಶೇಖ್ ಅಬ್ದುಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರು.
ಕುಪ್ಪೆಪದವು ಬದ್ರಿಯಾ ಜುಮಾ ಮಸೀದಿಗೆ ಒಳಪಟ್ಟ ಮದರಸಾದಲ್ಲಿ 218 ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಮದರಸದ ನಿಯಮಾನುಸಾರ ವಿದ್ಯಾರ್ಥಿಗಳು ತರಗತಿಗೆ ಬರುವಾಗ ತಮ್ಮ ಐಡಿ ಕಾರ್ಡ್ ಧರಿಸುವುದು ಕಡ್ಡಾಯವಾಗಿದೆ. ಆದರೆ 13 ವಿದ್ಯಾರ್ಥಿಗಳು ಐಡಿಕಾರ್ಡ್ ಧರಿಸಲು ಅವರ ಪೋಷಕರು ನಿರಾಕರಿಸುತ್ತಿದ್ದಾರೆ. ಮದರದ ನಿಯಮದಂತೆ ಐಡಿ ಕಾರ್ಡ್ ಧರಿಸದ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ನಿಲ್ಲಿಸಲಾಗುತ್ತದೆ.

ಆದರೆ ಸೋಮವಾರ ಬೆಳಿಗ್ಗೆ ವಿದ್ಯಾರ್ಥಿಗಳು ಮದರಸಕ್ಕೆ ಬಂದಿದ್ದು, ಐಡಿ ಕಾರ್ಡ್ ಧರಿಸದ ವಿದ್ಯಾರ್ಥಿಗಳನ್ನು ನಿಯಮದಂತೆ ತರಗತಿಯಿಂದ ಹೊರಗೆ ನಿಲ್ಲಿಸಲಾಗಿತ್ತು. ಈ ವಿಷಯವನ್ನು ಅರಿತ ವಿದ್ಯಾರ್ಥಿಯೊಬ್ಬರ ಪೋಷಕರಾದ ಶೇಖ್ ಅಬ್ದುಲ್ಲಾ ಎಂಬವರು ಮಸೀದಿಯ ಗುರುಗಳಲ್ಲಿ ಈ ಬಗ್ಗೆ ವಿಚಾರಿಸಿ, ಅವಾಚ್ಯವಾಗಿ ನಿಂದಿಸಿ ಗುರುಗಳಾದ ಮಹಮ್ಮದ್ ಹನೀಫ್ ಖಾಸ್ಮಿಯವರಿಗೆ ಹಲ್ಲೆಗೆ ಮುಂದಾಗಿದ್ದಾರೆಂದು ಬಜಪೆ ಠಾಣೆಗೆ ದೂರು ನೀಡಲಾಗಿದೆ.
ಮಸೀದಿಯ ಗುರುಗಳಿಗೆ ಹಲ್ಲೆಗೆ ಮುಂದಾಗಿದ್ದಾರೆಂಬ ವಿಷಯವನ್ನು ಅರಿತ ಕೆಲವರು ಮದರಸದ ಬಳಿ ಬಂದಿದ್ದರು. ನಂತರ ಶೇಖ್ ಅಬ್ದುಲ್ಲಾ ಹಾಗೂ ಅಬ್ದುಲ್ ರಝಾಕ್ ಎಂಬವರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಇಬ್ಬರ ಪರವಾಗಿದ್ದ ಯುವಕರು ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಅಬ್ದುಲ್ ರಝಾಕ್ ಹಾಗೂ ಶೇಖ್ ಅಬ್ದುಲ್ಲಾ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಬ್ದುಲ್ ರಝಾಕ್, ರಝಾಕ್ ಬ್ಲೂಸ್ಟಾರ್, ನವಾಝ್, ಇಸ್ಮಾಯಿಲ್ ಷರೀಫ್, ಡಿ.ಪಿ ಹಮ್ಮಬ್ಬ ಇವರ ವಿರುದ್ಧ ಶೇಖ್ ಅಬ್ದುಲ್ಲಾ, ಬಿಕ್ಕೋಡು ಷರೀಫ್, ಅಬ್ದುಲ್ ಅಜೀಜ್ ಮೇಸ್ತ್ರಿ, ಅಬ್ದುಲ್ ರಹಿಮಾನ್ ಮೇಸ್ತ್ರಿ, ಅಬ್ದುಲ್ ಹಕೀಂ, ಯೂಸಫ್ ಕುಳವೂರು ಅವರು ಬಜಪೆ ಠಾಣೆಗೆ ದೂರು ನೀಡಿದ್ದಾರೆ. ಹೀಗೆ ಬಜಪೆ ಠಾಣೆಯಲ್ಲಿ ಒಟ್ಟು ಮೂರು ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಈ ಮುಂಚೆಯೂ ಗಲಾಟೆ ನಡೆದಿದ್ದು, ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

By suddi9

Leave a Reply

Your email address will not be published. Required fields are marked *