ಕೈಕಂಬ: `ರಾಷ್ಟ್ರೀಯ ಸ್ವಚ್ಚತಾ ಅಭಿಯಾನ’ ಪ್ರಚಾರಾರ್ಥ ಉದ್ದೇಶವಿಟ್ಟುಕೊಂಡು ಸೈಕಲಿನಲ್ಲಿ ದೇಶ ಪರ್ಯಟನೆ ಕೈಗೊಂಡ ಶ್ರವಣ್ ಕುಮಾರ್ಗೆ ಗುರುಪುರದ ಹುಟ್ಟೂರಲ್ಲಿ ಭಾನುವಾರ ಬಿಜೆಪಿ ಗುರುಪುರ ಘಟಕ ಭವ್ಯ ಸನ್ಮಾನ ಹಮ್ಮಿಕೊಂಡಿತು. 
“ಸಾಮಾಜಿಕ ಜಾಲತಾಣಗಳಲ್ಲಿ ಸ್ವಚ್ಚತೆ ಅಭಿಯಾನ ನಡೆಸಿದರೆ ಏನೂ ಪ್ರಯೋಜವಿಲ್ಲ. ಜನರ ಮನಸ್ಸಿನಲ್ಲಿ ಸ್ವಚ್ಚತೆ ಅರಿವು ಮೂಡಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರಲ್ಲಿ ಅಂತಹ ಅರಿವು ಮೂಡಿಸುವ ಹಾಗೂ ಪ್ರಧಾನಿ ನರೇಂದ್ರ ಮೋದಿಯ `ರಾಷ್ಟ್ರೀಯ ಸ್ವಚ್ಚತಾ ಅಭಿಯಾನ’ ಕೈಗೊಂಡಿದ್ದೇನೆ ಎಂದು ಶ್ರವಣ್ ಹೇಳಿದರು.”
“ಜಪಾನಿನಲ್ಲಿ ಶಾಲಾ ಪಠ್ಯದಲ್ಲೇ ಮಕ್ಕಳಲ್ಲಿ ಸ್ವಚ್ಚತಾ ಅರಿವಿನ ಪಾಠವಿದೆ. ಇಲ್ಲೂ ಅದೇ ಮಾದರಿಯ ಶಿಕ್ಷಣ ಮಕ್ಕಳಿಗೆ ನೀಡಿದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ದೇಶ ತ್ಯಾಜ್ಯಮುಕ್ತವಾಗಬಹುದು. ನಮ್ಮೂರಲ್ಲಿ ಸಾಕಷ್ಟು ಕಸ ತುಂಬಿದೆ” ಎಂದು ಶ್ರವಣ್ ಕುಮಾರ್ ತಿಳಿಸಿದರು.
ದಿಲ್ಲಿ, ಹರ್ಯಾಣ, ಪಂಜಾಬ, ಹಿಮಾಚಲಪ್ರದೇಶ, ಕಾಶ್ಮೀರ, ಉತ್ತರಖಂಡ, ಉತ್ತರಪ್ರದೇಶ, ನೇಪಾಳ, ಬಿಹಾರ, ಪಶ್ಚಿಮಬಂಗಾಲ, ಭೂತಾನ, ಅಸ್ಸಾಂ, ಅರುಣಾಚಲಪ್ರದೇಶ, ಸಿಕ್ಕಿಂ, ಒಡಿಸ್ಸಾ, ಆಂಧ್ರ ಸಹಿತ 14 ರಾಜ್ಯಗಳ ಕ್ರಮಿಸಿ ಕರ್ನಾಟಕ ಪ್ರವೇಶಿಸಿರುವ ಇವರು, ಗುರುಪುರದಿಂದ ಕೇರಳದ ಕನ್ಯಾಕುಮಾರಿಯಾಗಿ ತಮಿಳುನಾಡು ಪ್ರವಾಸಕೈಗೊಳ್ಳಲಿದ್ದಾರೆ.
ಮೊದಮೊದಲಿಗೆ ಕೆಲವು ಕಹಿ ಅನುಭವಗಳಾಗಿವೆ ಕಾಶ್ಮೀರ ಪ್ರವಾಸದಲ್ಲಿರುವಾಗ ಕೆಲವು ಕಿಡಿಗೇಡಿಗಳು ಕಲ್ಲೆಸೆದು ಗಾಯಗೊಳಿಸಿ, ರಾಷ್ಟ್ರಧ್ವಜ ಕಸಿದುಕೊಂಡಿದ್ದರು. ಇನ್ನು ಕೆಲವರು ಹೀಯಾಳಿದರು. ಆದರೆ ಧೃತಿಗೆಡದ ಸೈಕಲ್ ಪ್ರವಾಸ ಮುಂದುವರಿಸಿದ್ದೇನೆ. ಇಲ್ಲಿನ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಸಿಲಿಗುರಿಯ ದೀಪಕ್ ಸೈಕಲ್ ಅಂಗಡಿ ಮಾಲಕರು ಒಂದೊಂದು ಸೈಕಲ್ ಕೊಡುಗೆಯಾಗಿ ನೀಡಿದ್ದಾರೆ. ಈಗಾಗಲೇ ಲಕ್ಷಾಂತರ ಹಳ್ಳಿಗಳಲ್ಲಿ ಪ್ರವಾಸಕೈಗೊಂಡಿರುವ ತನಗೆ ಕೆಲವೆಡೆ ವಿಚಿತ್ರ ಅನುಭವಗಳಾಗಿವೆ.
ವಿಜಯವಾಡ ರೈಲು ನಿಲ್ದಾಣದಲ್ಲಿ ಮಲಗಿದ್ದ ವೇಳೆ ಸೈಕಲ್ ಕಳವಾಗಿದ್ದರೂ ರೈಲ್ವೇ ಪೊಲೀಸರ ಕಾರ್ಯಾಚರಣೆ ಬಳಿಕ ಸೈಕಲ್ ಕೈಸೇರಿದೆ. ಬಸ್ ನಿಲ್ದಾಣ, ಶಾಲೆ, ದೇವಸ್ಥಾನ, ಸಂಘ-ಸಂಸ್ಥೆಗಳಲ್ಲಿ ವಾಸ್ತವ್ಯ ಹೂಡಿದ್ದೇನೆ. ಇನ್ನಷ್ಟು ಸಾಧನೆಗೆ ಹುಟ್ಟೂರ ಸನ್ಮಾನ ಉತ್ತೇಜನ ನೀಡಿದಂತಾಗಿದೆ ಎನ್ನುತ್ತಾರೆ ಶ್ರವಣ್.
ರಾಜೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಗುರುಪುರ ಪ್ರಖಂಡದ ಅಧ್ಯಕ್ಷ ವಿಷ್ಣು ಕಾಮತ್ ಹಾಗೂ ಬಿಜೆಪಿ ಯುವ ಮೋರ್ಚಾ ಗುರುಪುರ ಘಟಕಾಧ್ಯಕ್ಷ ಶ್ರೀಕರ ಶೆಟ್ಟಿ ಶ್ರವಣ್ ತಂದೆ ರಾಜೇಂದ್ರ, ತಾಯಿ ಕಲಾವತಿ ಹಾಗೂ ಬಿಜೆಪಿಗರಾದ ಪ್ರಶಾಂತ್ ಮುಂಡ, ರವಿ ಬಳ್ಳಿ, ಸೋಮಯ್ಯ, ಲಕ್ಷ್ಮೀಶ ಶೆಟ್ಟಿಗಾರ ಮೊದಲಾವರಿದ್ದರು. ವಸಂತ ಸುವರ್ಣ ಪ್ರಸ್ತಾವಿಕ ಮಾತನಾಡಿದರು. ಜಯಪ್ರಕಾಶ್ ಭಂಡಾರಿ ಸ್ವಾಗತಿಸಿದರು.
