ಮೂಡುಬಿದಿರೆ: ಲಂಚ ಕೊಡುವಲ್ಲಿ ಕಪ್ಪುಹಣವೇ ಬಳಕೆಯಾಗುತ್ತಿದ್ದು ಆಮಿಷದ ಕಾರ್ಯಚಟುವಟಿಕೆಯಲ್ಲಿ, ಭಯೋತ್ಪಾದನೆಯಲ್ಲಿ ಕಪ್ಪುಹಣದ ಪಾತ್ರ ಮಹತ್ತರವಾಗಿದೆ. ನೋಟು ಅಮಾನ್ಯೀಕರಣದ ಸಂದರ್ಭ ಹಣವನ್ನು ಬದಲಿಸುವ ಬದಲು ಈ ಯೋಜನೆಗೆ ಕಪ್ಪುಚುಕ್ಕೆ ಇಡಲು ಹೋದದ್ದು ನಮ್ಮ ಸಮಾಜದ ಭ್ರಷ್ಟ ಮನೋಸ್ಥಿತಿ ಯಾಗಿದೆ ಎಂದು ಎಂದು ನಟ, ರಂಗಕರ್ಮಿ ಹಾಗೂ ನಿದೇರ್ಶಕರಾದ ಎಸ್.ಎನ್ ಸೇತುರಾಂ ಹೇಳಿದರು.
ಆಳ್ವಾಸ್ ಕಾಲೇಜಿನ ಡಾ.ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಸೋಮವಾರ ನಡೆದ ತಿಂಗಳ ಚಿಂತನ ಕಾರ್ಯಕ್ರಮದಲ್ಲಿ ಭ್ರಷ್ಟ ಸಮಾಜ: ಕುಟುಂಬ ವ್ಯವಸ್ಥೆಯ ಮೇಲೆ ಅದರ ಪರಿಣಾಮ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಬ್ಯಾಂಕಿನ ಅಧಿಕಾರಿಗಳು ಮಾಡಬೇಕಾಗಿದ್ದ ಸೂಕ್ತ ಕೆಲಸವನ್ನು ಭ್ರಷ್ಟ ಹಾದಿ ಹಿಡಿದದ್ದು ನಮ್ಮ ಸಮಾಜದ ದುರಂತವಾಗಿದೆ. ಕಪ್ಪುಹಣ ಯಾರ ಮನೆಯಲ್ಲಿ ಇತ್ತೋ ಅದು ಬದಲಾಗಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಆಸ್ಪತ್ರೆ, ಶಿಕ್ಷಣ ಸಂಬಂಧಿ ಬೆಳವಣಿಗೆ ಖಾಸಗಿ ಆಡಳಿತದ ಪಾಲಾಗುತ್ತಿದ್ದು ಅಬಕಾರಿ ಇಲಾಖೆಗೆ ಸರ್ಕಾರ ಯಥೇಚ್ಛವಾದ ಉತ್ತೇಜನ ಕೊಡುತ್ತಿದೆ. ಸರ್ಕಾರ ಆಸ್ಪತ್ರೆ ಜಾಸ್ತಿ ಮಾಡಿದೆ, ಸ್ಕೂಲ್ ಜಾಸ್ತಿ ಮಾಡಿದೆ ಎಂಬ ವಿಚಾರವನ್ನು ನಾವು ಮಾಧ್ಯಮದಲ್ಲಿ ಕಾಣಲು ಸಾಧ್ಯವಿಲ್ಲ. ಒಬ್ಬ ಉದ್ಯೋಗಿಗೆ ತಿಂಗಳು ಗಟ್ಟಲೆ ಸಂಬಳ ಕೊಡದೆ ದುಡಿಸುತ್ತೇವೆ, ಅದೇ ನೌಕರ ಸಂಬಳ ಸಿಗಲಿಲ್ಲವೆಂಬ ಹತಾಶೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಧನ ಕೊಡುತ್ತೇವೆ, ಬದುಕಲು ಬಿಡುವುದಿಲ್ಲ ತಿಥಿ ಚಂದ ಮಾಡ್ತೇವೆ ಎಂದು ವಿಡಂಬನೆಯ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉಪಸ್ಥಿತರಿದ್ದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿ ರಂಗಕರ್ಮಿ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ `ಅಭಿವೃದ್ಧಿ’ ಎಂಬ ಕಿರು ನಾಟಕವನ್ನು ಪ್ರದರ್ಶಿಸಿದರು. ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಹರೀಶ್.ಟಿ.ಜಿ ವಂದಿಸಿದರು.

