ಬಂಟ್ವಾಳ: ಇಲ್ಲಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆದ್ದಳಿಕೆ ಎಂಬಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಇನ್ಸ್‍ಪೆಕ್ಟರ್ ಸುನಿಲ್ ವೈ.ನಾಯಕ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಜಿಲೆಟಿನ್ ಕಡ್ಡಿಯನ್ನು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಡುವಿನ ಬಿ.ಸಿ.ರೋಡು ಎಂಬಲ್ಲಿಂದ ನೆಲ್ಲಿಗುಡ್ಡೆ ಕಡೆಗೆ ಕಪ್ಪು ಬಣ್ಣದ ಆಕ್ಟಿವಾ ಹೊಂಡಾ ವಾಹನದಲ್ಲಿ ಜಿಲೆಟಿನ್ ಕಡ್ಡಿ ಸಾಗಾಟ ಮಾಡುತ್ತಿದ್ದ ವೇಳೆ ಕೆದ್ದಳಿಕೆ ಎಂಬಲ್ಲಿ ತಡೆದು ನಿಲ್ಲಿಸಿದ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಆರೋಪಿಯನ್ನು ಪುಂಜಾಲಕಟ್ಟೆ ಸಮೀಪದ ಕುಕ್ಕಳ ಗ್ರಾಮದ ಬಸವನಗುಡಿ ನಿವಾಸಿ ಚಿನ್ನಸ್ವಾಮಿ(70) ಎಂದು ಗುರುತಿಸಲಾಗಿದ್ದು, ಈತನಿಂದ ದ್ವಿಚಕ್ರ ವಾಹನ ಸಹಿತ 15 ಜಿಲೆಟಿನ್ ಕಡ್ಡಿ, 99 ಡಿಟೋನೇಟರ್ ಒಟ್ಟು ರೂ 1.5ಲಕ್ಷ ಮೌಲ್ಯದ ಸ್ಪೋಟಕ ಸಾಮಾಗ್ರಿ ವಶಪಡಿಸಿಕೊಳ್ಳಲಾಗಿದೆ. ಎಸ್ಪಿ ಡಾ.ರವಿಕಾಂತೇಗೌಡ, ಹೆಚ್ಚುವರಿ ಎಸ್ಪಿ ಸಜಿತ್ ನಿರ್ದೇಶನದಂತೆ ಸಿಬ್ಬಂದಿಗಳಾದ ನಾರಾಯಣ, ವಾಸು ನಾಯ್ಕ್, ಲಕ್ಷ್ಮಣ, ಇಕ್ಬಾಲ್, ಉದಯ ರೈ, ಉದಯ ಗೌಡ, ಪ್ರವೀಣ ಎಂ.ತಾರನಾಥ್, ಶೋನ್ ಶಾ, ಸುರೇಶ್ ಕುಮಾರ್ ಮತ್ತಿತರ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.
