ಮೂಡುಬಿದಿರೆ : ಹಲವು ಮಿತಿಗಳನ್ನು ಹೊಂದಿರುವ ವೀರಶೈವ ಮತ್ತು ಲಿಂಗಾಯತ ಧರ್ಮಗಳಿಗಿಂತಲೂ ವಚನಧರ್ಮ ಪ್ರಾಯೋಗಿಕವಾಗಿ ಔಚಿತ್ಯಪೂರ್ಣವಾಗಿದೆ. ದೇವರು ಮತ್ತು ಭಕ್ತನ ನಡುವೆ ಮಧ್ಯವರ್ತಿಗಳ ಅಸ್ತಿತ್ವ, ಜಾತಿ, ಲಿಂಗ ತಾರತಮ್ಯ, ಬಯಲು ರಂಜಕತನ ಇವನ್ನೆಲ್ಲ ದೂರೀಕರಿಸುವ ಅಗತ್ಯವನ್ನು ಸಾರಿದ ವಚನಗಳು ಮಾನವ ಹಕ್ಕುಗಳು ಆದರೆ ಪರಿಣಾಮಕಾರಿಯಾಗಿ ಪ್ರತಿಪಾದಿಸುತ್ತಿವೆ’ ಎಂದು ಆಳ್ವಾಸ್ ಪ.ಪೂ. ಕಾಲೇಜಿನ ಕನ್ನಡ ಬೋಧಕ ಟಿ.ಎ.ಎನ್. ಖಂಡಿಗೆ ಹೇಳಿದರು.

ಇಲ್ಲಿನ ಸಮಾಜ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಐದು ದಿನಗಳ ಕಾಲ ನಡೆದ 55ನೇ ವರ್ಷದ ಮೂಡುಬಿದಿರೆ ಶ್ರೀ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ವಚನ ಧರ್ಮದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಬಳಿಕ ಸಮಿತಿಯ ಕೋಶಾಧಿಕಾರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸುತ್ತಿರುವ ಕಲಾವಿದ, ಸಮಾಜ ಸೇವಕ ಬಿ. ಮೋಹನದಾಸ ಶೆಟ್ಟಿ ಹಾಗೂ ಎತ್ತರ ಜಿಗಿತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುತ್ತಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಉಡುಪಿ ಜಿಲ್ಲೆಯ ದೊಂಡೆರಂಗಡಿ ಕುಕ್ಕುಜೆಯ ಅಭಿನಯ ಎಸ್. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣೆ:
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಮಾರಂಭವು ಎಂಸಿಎಸ್ ಬ್ಯಾಂಕ್ ಮತ್ತು ಆಳ್ವಾಸ್ ಸಮಾಜಕಾರ್ಯ ಕಾಲೇಜಿನ ಸಹಯೋಗದೊಂದಿಗೆ ಸಂಯೋಜಿಸಲಾದ `ಹಿರಿಯ ನಾಗರಿಕರಿಗೆ ಗುರುತು ಪತ್ರ ವಿತರಣ ಕಾರ್ಯಕ್ರಮ’ವನ್ನು ಮೂಡಬಿದಿರೆ ಕೋ ಓಪರೇಟಿವ್ ಬ್ಯಾಂಕ್ನ ಸಿಇಓ ಚಂದ್ರಶೇಖರ ಎಂ. ಅವರು ಜ್ಯೋತಿ ಬೆಳಗಿಸಿ, ಸ್ವತ: ತಾವು ದಾಖಲೆ ಪತ್ರಗಳಿಗೆ ಸಹಿ ಮಾಡಿ ತಮ್ಮ ಗುರುತು ಪತ್ರವನ್ನು ಪಡೆಯುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರೋಟರಿ ಅಧ್ಯಕ್ಷ ಡಾ| ರಮೇಶ್, ಇನ್ನರ್ವೀಲ್ ಅಧ್ಯಕ್ಷೆ ಚಂದ್ರಿಕಾ ಮಲ್ಯ, ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖಾಧಿಕಾರಿ ಯಮುನಾ ಡಿ., ಜಿಲ್ಲಾ ಹಿರಿಯ ನಾಗರಿಕರ ಸಂಘದ ಕೆ. ರಮೇಶ್ ರಾವ್ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪುರಸಭಾ ಸದಸ್ಯ ಪ್ರಸಾದ್ ಕುಮಾರ್, ಧನಂಜಯ ಸಮ್ಮಾನ ಪತ್ರಗಳನ್ನು ವಾಚಿಸಿದರು. ಗೋಪಾಲ್ ಎಂ. (ಕ್ರೀಡೆ), ಪ್ರಸನ್ನ ಶೆಣೈ (ಸಾಂಸ್ಕøತಿಕ) ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ನೀಡಿದರು. ಸಂಚಾಲಕ ರಾಜಾರಾಮ್ ನಾಗರಕಟ್ಟೆ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ. ಅತಿಥಿಗಳನ್ನು ಗೌರವಿಸಿದರು. ಯತಿರಾಜ ಶೆಟ್ಟಿ ನಿರೂಪಿಸಿದರು.
ರಾಜ್ಯದಲ್ಲೇ ದಾಖಲೆ ನಿರ್ಮಿಸಿದ ಗುರುತಿನ ಚೀಟಿ
ಸೋಮವಾರ ನಡೆದ ಹಿರಿಯ ನಾಗರಿಕರ ಗುರುತುಚೀಟಿ ದಾಖಲೀಕರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದು 175ರಷ್ಟು ಮಂದಿ ಗುರುತು ಚೀಟಿ ಸ್ವೀಕರಿಸಿದರು. ಈ ಏಳು ವರ್ಷಗಳಲ್ಲಿ 4,000ಕ್ಕೂ ಅಧಿಕ ಮಂದಿ ಈ ಯೋಜನೆಯ ಪ್ರಯೋಜನ ಪಡೆದಂತಾಗಿರುವುದು ರಾಜ್ಯದಲ್ಲೇ ದಾಖಲೆ ಎಂದು ತಿಳಿದುಬಂದಿದೆ.
