ಕೈಕಂಬ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕೊಟ್ಟಿರುವ ಭಾರತ ಬಂದ್ ವೇಳೆ ಗುರುಪುರ ಕೈಕಂಬದಲ್ಲಿ ನಡೆದ ಪ್ರತಿಭಟನೆಯ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಗೊಂದಲ ಉಂಟಾಗಿತ್ತು.

ಬೆಳಗ್ಗೆ ಕೈಕಂಬದಲ್ಲಿ ಅಂಗಡಿ ಮುಂಗಟ್ಟುಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಬಂದ್ ಮಾಡಿಸಿದ್ದು, ಇದರಿಂದ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು ಬಲವಂತದಿಂದ ಅಂಗಡಿಗಳನ್ನು ಬಂದ್ ಮಾಡಿಸುವುದು ಕಾನೂನು ಬಾಹಿರಎಂದು ಅಸಮಾದಾನ ವ್ಯಕ್ತಪಡಿಸಿದರು.

ಇದಾದ ನಂತರ ಕೈಕಂಬದ ಹೃದಯಭಾಗದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ವಾಣಿಜ್ಯ ಸಾಗಾಟದ ವಾಹನಗಳನ್ನು ತಡೆದು ನಿಲ್ಲಿಸಿದರು. ಇದರ ಜೊತೆಗೆ ಮಲ್ಟಿ ಎಕ್ಸೆಲ್ ಬಸ್‍ಗಳನ್ನು ತಡೆದು ಸಂಚಾರಕ್ಕೆ ತಡೆಯೊಡ್ಡಿದರು. ಸ್ಥಳದಲ್ಲಿ ಬಜಪೆ ಪೊಲೀಸರಿದ್ದರೂ ಕಾಂಗ್ರೇಸ್ ಕಾರ್ಯಕರ್ತರ ವರ್ತನೆಯಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಲವಂತದ ಬಂದ್‍ಗೆ ಅವಕಾಶವಿಲ್ಲದಿದ್ದರೂ ಈ ರೀತಿ ವಾಹನಗಳನ್ನು ತಡೆಗಟ್ಟುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಕಾರ್ಯಕರ್ತರು ನೀವೂ ಕೂಡಾ ಈ ಹಿಂದೆ ಹಲವು ಬಂದ್‍ಗಳನ್ನು ನಡೆಸಿದ್ದೀರಿ. ಅದರಂತೆ ದೇಶವ್ಯಾಪಿ ನಡೆಯುವ ಪ್ರತಿಭಟನೆಗೆ ಬೆಂಬಲಿಸಲು ಈ ರೀತಿ ಮಾಡುತ್ತಿದ್ದೇವೆ ಎಂದು ಪ್ರತ್ಯಾರೊಪ ಮಾಡಿದರು. ಎಸ್‍ಐ ಪೂವಪ್ಪ ಅವರು ಎಲ್ಲರನ್ನೂ ಸಮಧಾನಿಸಲು ಯತ್ನಿಸಿದರಾದರೂ ಗೊಂದಲ ಮುಂದುವರಿದಿತ್ತು.
ಕೊನೆಗೆ ಆಗಮಿಸಿದ ಇನ್ಸ್‍ಪೆಕ್ಟರ್ ಪರಶಿವ ಮೂರ್ತಿ ಅವರು ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಧಾನ ಪಡಿಸಿದರು. ಭಾರತ ಬಂದ್‍ಗೆ ಕರೆ ನೀಡಲಾಗಿದೆಯೇ ಹೊರತು ರಸ್ತೆ ತಡೆಗೆ ಅನುಮತಿ ಇದೆಯೇ ಎಂದು ಬಿಜೆಪಿ ಕಾರ್ಯಕರ್ತರು ತೀವ್ರ ಮಾತಿನ ಚಕಮಕಿ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ ಎಂದು ಕಾಂಗ್ರೆಸಿಗರು ವಾದಿಸಿದಾಗ ಬಿಜೆಪಿ ಕಾರ್ಯಕರ್ತರು, ಪ್ರಜಾಪ್ರಭುತ್ವದಲ್ಲಿ ವಾಹನಗಳನ್ನು ತಡೆದು ತೊಂದರೆ ನೀಡಲು ಹಕ್ಕಿದೆಯೇ ಎಂದು ಬಿಜೆಪಿಗರು ಪ್ರಶ್ನಿಸಿದ್ದಾರೆ.
ಬಲವಂತದ ಬಂದ್‍ಗೆ, ವಾಹನ ತಡೆಗೆ ಪೊಲೀಸರು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದರು. ಆಗ ಇನ್ಸ್‍ಪೆಕ್ಟರ್ ಪರಶಿವ ಮೂರ್ತಿ ಅವರು ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಷ್ಟೇ ಅಲ್ಲದೆ ನಿಲುಗಡೆಗೊಳಿಸಿದ್ದ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಶಾಂತಿಯುತ ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಪ್ರತಿಭಟನೆಯ ವೇಳೆ ಮಾಜಿ ಶಾಸಕ ಮೊಯ್ದೀನ್ ಬಾವಾ ಆಗಮಿಸಿ ಪ್ರತಿಭಟನೆಗೆ ಸಾಥ್ ನೀಡಿದರು. ಕೈಕಂಬದಲ್ಲಿ ಅಂಗಡಿಮುಂಗಟ್ಟುಗಳು ಮುಚ್ಚಿದ್ದು, ಕೆಲವು ಹೋಟೆಲ್‍ಗಳು ತೆರೆದಿದ್ದವು. ಉಳಿದಂತೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

