ಕೈಕಂಬ:ಮಳೆ ಮುಗಿದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರಕ್ಕೆ ಹತ್ತಿರದ ದೋಣಿಂಜೆ, ಕಂದಾವರ, ಅದ್ಯಪಾಡಿ, ಮೂಡುಶೆಡ್ಡೆ ಹಾಗೂ ಫಲ್ಗುಣಿ ನದಿ ತಟದ ಉದ್ದಗಲಕ್ಕೆ ಅಡಕೆ ತೋಟದಲ್ಲಿ ಕೊಳೆರೋಗ ವ್ಯಾಪಕವಾಗಿ ಬಾಧಿಸಿದ್ದು, ಕೃಷಿಕರು ತಲೆಮೇಲೆ ಕೈ ಇಟ್ಟುಕೊಳ್ಳವಂತಾಗಿದೆ. ಇಲ್ಲಿನ ಹಲವರು ಈಗಾಗಲೇ ತೋಟಗಾರಿಕೆ ಇಲಾಖೆ ಸಂಪರ್ಕಿಸಿ, ಪರಿಹಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಭಾಗದ ಹೆಚ್ಚಿನ ತೋಟಗಳಲ್ಲಿ ಮಿಡಿ ಅಡಕೆ ರಾಶಿರಾಶಿ ಬಿದ್ದಿದೆ.

“ಕೊಳೆರೋಗದಿಂದ ನಮ್ಮ ಅಡಕೆತೋಟ ಸಂಪೂರ್ಣ ನಾಶವಾಗಿದೆ. ಈ ಬಾರಿ ಸುರಿದ ಅಧಿಕ ಮಳೆಯಿಂದ ನದಿ ತಟದಲ್ಲಿರುವ ಅಡಕೆ ತೋಟದಲ್ಲಿ ಸುಮಾರು ಒಂದೂವರೆ ತಿಂಗಳು ಪ್ರವಾಹ ನೀರು ನಿಂತಿತ್ತು. ಈಗ ಮಳೆ ಪ್ರಮಾಣ ತಗ್ಗಿದ್ದರಿಂದ ಪ್ರವಾಹ ಇಳಿದಿದೆ. ತೋಟದ ಭೂಮಿ ಅತಿ ಹೆಚ್ಚು ತಂಪಾಗಿರುವುದರಿಂದ ಕೊಳೆರೋಗ ವ್ಯಾಪಕವಾಗಿ ಹರಡಿದೆ. ಇದರಿಂದ ಕಂಗುಗಳ ಮಿಡಿ ಅಡಕೆ(ತುಳುವಿನಲ್ಲಿ `ಉರುವೆ’) ಒಂದೇ ಸಮನೆ ಉದುರಲಾರಂಭಿಸಿದೆ” ಎಂದು ಕಂದಾವರ ಕೊಪ್ಪಳದ ಕೃಷಿಕ ಯತಿರಾಜ ಶೆಟ್ಟಿ ವಿವರಿಸಿದರು.
ಹಿಂದೆಲ್ಲ ಮಳೆಗಾಲದಲ್ಲಿ ಕೊಳೆರೋಗ ತಡೆಗೆ ಬೋರ್ಡೋ ದ್ರಾವಣ(ಮೈಲುತುತ್ತು-ಸುಣ್ಣ) ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ಈ ಬಾರಿ ಎರಡು ತಿಂಗಳ ಹಿಂದೆ ಈ ದ್ರಾವಣ ಸಿಂಪಡಿಸಲಾಗಿದ್ದರೂ, ಕಳೆದ ಒಂದು ವಾರದಿಂದ ಏಕಾಏಕಿಯಾಗಿ ಎಳೆ ಅಡಕೆ ಉದುರಲಾರಂಭಿಸಿದೆ ಮತ್ತು ಸುಮಾರು ಎರಡು ಲಕ್ಷ ರೂ ಅಡಕೆ ನಷ್ಟವಾಗಿದೆ ಎಂದು ಎರಡೂವರೆ ಎಕ್ರೆ ಜಾಗದಲ್ಲಿ ಅಡಕೆ ತೋಟ ಹೊಂದಿರುವ ಯತಿರಾಜ ಶೆಟ್ಟಿ ತಿಳಿಸಿದರು.

ಕಂದಾವರ, ಅದ್ಯಪಾಡಿ, ಮೂಡುಶೆಡ್ಡೆ, ಗುರುಪುರ, ಕಾರಮೊಗರು ಸುತ್ತಲ ಪ್ರದೇಶದ ಎಕ್ರೆಗಟ್ಟಲೆ ಅಡಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಿಸಿದೆ. ಪರಿಣಾಮ, ಈ ಭಾಗದ ಸದಾಶಿವ ಶೆಟ್ಟಿ ಏತಮೊಗರುಗುತ್ತು(ಸಾಧು ಶೆಟ್ಟಿ), ಚಿತ್ತಣ್ಣ ಯಾನೆ ರಮಾನಂದ ಅತ್ತರ್, ಪ್ರಭಾಕರ ಶೆಟ್ಟಿ, ಹಂಸಾವತಿ ಹೆಗ್ಡೆ, ಕಂದಾವರ ಶ್ರೀಧರ ಆಳ್ವ, ದಿ. ಮಂಜಯ್ಯ ಶೆಟ್ಟಿ ಮನೆಯವರು, ಬಾಲಕೃಷ್ಣ ಶೆಟ್ಟಿ ಹಾಗೂ ಇನ್ನಿತರ ಕೃಷಿಕರು ಕಂಗಾಲಾಗಿದ್ದಾರೆ.

—–
ಬಾಕ್ಸ್ :-
ಮೂಡುಶೆಡ್ಡೆ ಮತ್ತು ಪಡುಶೆಡ್ಡೆ ಭಾಗದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅವೈಜ್ಞಾನಿಕ ಉಪ್ಪು ನೀರಿನ ತಡೆಗೋಡೆ ಮತ್ತು ಕಿಂಡಿ ಅಣೆಕಟ್ಟಿನಿಂದಾಗಿ ಈ ವರ್ಷ ಕಂದಾವರ, ಅದ್ಯಪಾಡಿ, ಮೂಡುಶೆಡ್ಡೆ ಭಾಗದ ತೋಟಗಳು ತಿಂಗಳುಗಟ್ಟಲೆ ಪ್ರವಾಹ ನೀರಲ್ಲಿ ಮುಳುಗಡೆಯಾಗಿವೆ. ಹಿಂದೆಂದೂ ಈ ಸ್ಥಿತಿ ಬಂದಿಲ್ಲ ಎಂದು ಸ್ಥಳೀಯ ಕೃಷಿಕರು ದೂರಿಕೊಂಡಿದ್ದಾರೆ.
—–
ಬಾಕ್ಸ್ :
ಅಧಿಕಾರಿ ತಂಡದಿಂದ
ತೋಟಗಳ ಸಮೀಕ್ಷೆ
ಒಂದು ತಿಂಗಳ ಹಿಂದೆಯೇ ಸ್ಥಳೀಯ ಕೃಷಿಕರು ತಹಶೀಲ್ದಾರರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಬುಧವಾರ(ಆ. 29) ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ್ ಹಾಗೂ ಕಂದಾವರ ಗ್ರಾಮದ ಗ್ರಾಮ ಲೆಕ್ಕಿಗರಾದ ಜ್ಞಾನೇಶ್ವರಿ, ಗ್ರಾಪಂ ಗ್ರಾಮ ಸಹಾಯಕ ಭಾಸ್ಕರ್, ಅದ್ಯಪಾಡಿ ಗ್ರಾಮ ಲೆಕ್ಕಿಗ ಯಮುನಪ್ಪ ಎಸ್ ಕೋರಿ ಹಾಗೂ ತಂಡ ಸ್ಥಳೀಯರ ಅಡಕೆ ತೋಟದಲ್ಲಿ ಕೊಳೆರೋಗ ನಷ್ಟದ ಸಮೀಕ್ಷೆ ನಡೆಸಿತು.
–
ಬಯೋಪಾಟ್ ರಾಸಾಯನ ನಿಷೇಧಿಸಲ್ಪಟ್ಟ ಬಳಿಕ, ಅಡಕೆ ತೋಟಗಾರರು ಮತ್ತದೇ ಬೋರ್ಡೋ ದ್ರಾವಣ(ಮೈಲುತುತ್ತು-ಸುಣ್ಣ) ಅವಲಂಬಿಸಿದ್ದಾರೆ. ಅತಿ ಮಳೆಯಾದಲ್ಲಿ ಕೊಳೆರೋಗ ನಿಯಂತ್ರಿಸಲು ಈ ದ್ರಾವಣವೂ ಪರಿಣಾಮಕಾರಿಯಲ್ಲ ಎಂಬುದು ಈ ವರ್ಷ ಶ್ರುತಪಟ್ಟಿದೆ. ಆದ್ದರಿಂದ ಕೊಳೆರೋಗ ತಡೆಯಲು ಕೃಷಿ ವಿಜ್ಞಾನದಲ್ಲಿ ಪರಿಣಾಮಕಾರಿಯಾದ ಔಷಧಿಯೊಂದರ ಆವಿಷ್ಕಾರವಾಗಬೇಕಿದೆ. ಇಲ್ಲವಾದಲ್ಲಿ ಇದು ಅಡಕೆ ತೋಟಕ್ಕೆ ಬಾಧಿಸುವ ಕ್ಯಾನ್ಸರ್ ರೋಗವಾಗುವುದರಲ್ಲಿ ಎರಡು ಮಾತಿಲ್ಲ.
