ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾಕೇಂದ್ರ ಮಂಗಳೂರು ಹೊರತು ಪಡಿಸಿದರೆ ಅತ್ಯಂತ ಸುವಿಶಾಲ ನಿಲ್ದಾಣ ಎಂಬ ಹೆಗ್ಗಳಿಕೆಯ ಮೂಡುಬಿದಿರೆ ಬಸ್ಸು ನಿಲ್ದಾಣಕ್ಕಿದೆ. ಇಲ್ಲಿ ಮಂಗಳೂರು, ಕಾರ್ಕಳ, ಬೆಳ್ತಂಗಡಿಯ ಬಸ್ಸುಗಳಿಗೆ ಹೊರತುಪಡಿಸಿದರೆ ಉಳಿದ ಬಸ್ಸುಗಳಿಗೆ ನಿಲ್ದಾಣ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಪರ ವಿರೋಧ ಬೆಳವಣಿಗೆಗಳಾಗಿದ್ದರೂ ಸಹ ಆಡಳಿತ ಅವ್ಯವಸ್ಥೆ, ಕಟ್ಟುನಿಟ್ಟಿನ ಕಾನೂನು ಕ್ರಮದ ನಿಟ್ಟಿನಲ್ಲಿ ಇಚ್ಛಾಶಕ್ತಿಯ ಕೊರತೆ ಸಮಸ್ಯೆಯನ್ನು ದಿನಕಳೆದಂತೆ ಬಿಗಡಾಯಿಸುತ್ತಲೇ ಇವೆ.
ಈ ನಿಲ್ದಾಣದಲ್ಲಿ ಏಕಕಾಲಕ್ಕೆ 30ರಿಂದ 50 ಬಸ್ಸುಗಳು ನಿಲ್ಲಬಹುದಾದ ಸ್ಥಳಾವಕಾಶ ಇಲ್ಲಿ ಇದೆ. ಆದರೆ ಈಗ ಬರೇ ಹದಿನೈದರಷ್ಟು ಬಸ್ಸುಗಳು ಮಾತ್ರ ನಿಲ್ಲುವಷ್ಟು ಸ್ಥಳವಿದೆ.
ಇಲ್ಲಿ ಬಸ್ಸುಗಳನ್ನು ಕಷ್ಟಪಟ್ಟು ನಿಲ್ಲಿಸಬೇಕಾದ ಪರಿಸ್ಥಿತಿ ಚಾಲಕರದು. ಇಲ್ಲಿನ ಸುಮಾರು 150ರಷ್ಟು ಅಂಗಡಿ ವರ್ತಕರು ಇಲ್ಲಿ ವ್ಯವಹಾರ ಮಾಡಿಕೊಂಡಿದ್ದು ಅವರ ವಾಹನಗಳಿಗೆ ಪಾರ್ಕಿಂಗ್, ಗಿರಾಕಿಗಳ ವಾಹನಗಳಿಗೆ, ಬಳಿಕ ಬಸ್ಸು ನಿಲ್ದಾಣಕ್ಕೆ ಬರುವ ಪ್ರಯಾಣಿಕರ ವಾಹನಗಳಿಗೆ ವ್ಯವಸ್ಥೆ ಆಗಬೇಕಾಗಿದೆ. ಪುರಸಭೆಯದ್ದೇ ವಾಣಿಜ್ಯ ಸಂಕೀರ್ಣದಲ್ಲಿ 60ಕ್ಕೂ ಮಿಕ್ಕಿದ ಮೂರಂತಸ್ತಿನ ವ್ಯವಹಾರ ಮಳಿಗೆಯಿದೆ. ಆದರೆ ಪಾರ್ಕಿಂಗ್ ಬಗ್ಗೆ ಪ್ರತ್ಯೇಕ ಸ್ಥಳವಿಲ್ಲ.
ಪುರಸಭೆಯು ಸಾಕಷ್ಟು ಬಾರಿ, ವರ್ತಕರಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳ ನಿಗದಿಪಡಿಸಿ, ಪೇ ಪಾರ್ಕಿಂಗ್ ವ್ಯವಸ್ಥೆಯನ್ನೂ ಅಳವಡಿಸಿ ಸಮಸ್ಯೆ ನಿವಾರಿಸಲು ಅನೇಕ ಪ್ರಯತ್ನ ನಡೆದರೂ ಅದರ ಅನುಷ್ಠಾನದಲ್ಲಿ ಎಡವಿದೆ. ಪರಿಣಾಮವಾಗಿ ಬಿಸಿರೋಡ್, ನಾರಾವಿ, ಮಿತ್ತಬೈಲು, ಶಿರ್ತಾಡಿ ಹೀಗೆ ಗ್ರಾಮಾಂತರ ಪರಿಸರದ ಬಸ್ಸುಗಳ ನಿಲುಗಡೆಯಾಗುವಲ್ಲಿ ಖಾಸಗಿ ಇತರೆ ವಾಹನಗಳು ಸ್ಥಳ ಆಕ್ರಮಿಸಿಕೊಳ್ಳುವುದು ಮಾಮೂಲಾಗಿಬಿಟ್ಟಿದೆ. ಕೆಲವೊಮ್ಮೆ ಬಸ್ಸುಗಳು ನಿಲ್ಲಲು ಪರದಾಡಬೇಕಾದ ಪರಿಸ್ಥಿತಿಯಿದೆ.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ವಾಹನಗಳ ಸಂಖ್ಯೆಯ ಜತೆಗೆ ಹೆಚ್ಚುತ್ತಿರುವ ಈ ಸಮಸ್ಯೆಯ ಪರಿಣಾಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡುತ್ತಿಲ್ಲ. ಆದರೆ ಈ ಸಮಸ್ಯೆ ವಿಪರೀತಕ್ಕೆ ಹೋಗುವ ಮೊದಲೇ ಯೋಜನಾಬದ್ಧತೆಯ ನಿರ್ಧಾರವನ್ನು ಪುರಸಭೆ ಮಾತ್ರವಲ್ಲ, ಸಂಬಂಧಪಟ್ಟವರೆಲ್ಲ ಕೈಗೊಳ್ಳುವ ಅನಿವಾರ್ಯತೆ ಇಲ್ಲಿ ಎದುರಾಗಿದೆ.
ಮೂಡುಬಿದಿರೆಯಲ್ಲಿ ಎಲ್ಲ ಬಸ್ ನಿಲ್ದಾಣಗಳೂ ಅತಂತ್ರ ಸ್ಥಿತಿಯಲ್ಲೇ ಇವೆ. ಹಳೆ ಬಸ್ಸು ನಿಲ್ದಾಣ ಈಗ ಹೆಸರಿಗೆ ಮಾತ್ರ. ಇಲ್ಲಿ ಖಾಸಗಿ ಬಾಡಿಗೆ ವಾಹನಗಳಿಗೆ ಪಾರ್ಕಿಂಗ್ ನೀಡಲಾಗಿದೆ. ಸಂಜೆ ಕತ್ತಲಾಗುತ್ತಿದ್ದಂತೆ ಬಸ್ಸುಗಳೆಲ್ಲ ಹತ್ತಿರದ ನಿಲ್ದಾಣಕ್ಕೆ ತೆರಳದೇ ಹೆದ್ದಾರಿಯ ಅಂಚಿನಲ್ಲಿರುವ ಈ ಹಳೇ ಬಸ್ಸು ನಿಲ್ದಾಣದ ಬಳಿ ನಿಂತು ಮುಂದುವರೆಯುತ್ತವೆ. ಇನ್ನೊಂದೆಡೆ ಈಗ ಸರ್ಕಾರಿ ಬಸ್ಸುಗಳ ನಿಲ್ದಾಣವಾಗಿ ಬದಲಾಗಿರುವ ಇನ್ನೊಂದು ಬಸ್ಸು ನಿಲ್ದಾಣದಲ್ಲಿಯೂ ಖಾಸಗಿ ವಾಹನಗಳೇ ತುಂಬಿರುವುದು ನಿರ್ಲಕ್ಷ್ಯ. ಅಲ್ಲಿ ಮಾತ್ರ ಕಾರ್ಕಳ -ಧರ್ಮಸ್ಥಳ ರಸ್ತೆಯಲ್ಲಿ ಓಡಾಡುವ ಬಹುತೇಕ ಸರ್ಕಾರಿ ಬಸ್ಸುಗಳ ಪೈಕಿ ಕೆಲವು ಬಸ್ಸುಗಳು ನಿಲ್ದಾಣಕ್ಕೇ ಬಾರದೇ, ಬಂದರೂ ವನ್‍ವೇ ಮೂಲಕ ಸಾಗದೇ ತಪ್ಪಿಸಿಕೊಂಡು ಓಡಾಡುತ್ತಿರುವುದು ಪ್ರಯಾಣಿಕರಿಗೆ ತೊಂದರೆಯಾಗಿದೆ.
ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲಿ ವ್ಯಾಪಾರಿಗಳ, ಪ್ರಯಾಣಿಕರ ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆಗೆ ಮೊದಲೇ ಯಾವುದೇ ಪರಿಹಾರ ನಡೆದಂತೆ ಕಾಣುತ್ತಿಲ್ಲ. ಇನ್ನು ಮುಂದೆಯಾದರೂ ಅಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಣೆಯ ಕ್ರಮಕ್ಕೆ ಸಮಗ್ರ ಪಾರ್ಕಿಂಗ್ ಪ್ಲ್ಯಾನ್ ಅನುಷ್ಠಾನಗೊಳ್ಳಬೇಕಾಗಿದೆ. ಮುಖ್ಯರಸ್ತೆಯಿಂದ ಎತ್ತರದಲ್ಲಿರುವ ಬಸ್ಸು ನಿಲ್ದಾಣದಲ್ಲಿ ನೆಲಮಟ್ಟದವರೆಗೆ ಸಮತಟ್ಟುಗೊಳಿಸಿ ಅಂಡರ್ ಗ್ರೌಂಡ್ ಪಾರ್ಕಿಂಗ್ ಯೋಜನೆ ಜಾರಿಗೊಳಿಸಲು ಸಾಧ್ಯವಾದರೆ ಪುರಸಭೆಗೂ ಆದಾಯ ಹೆಚ್ಚಲಿದೆ. ಹೆಚ್ಚುವರಿ ಸ್ಥಳಾವಕಾಶವೂ ದೊರೆಯಲಿದೆ.



