ಬಂಟ್ವಾಳ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯಲಿದ್ದು, ಪ್ರಸಕ್ತ ಬಿಜೆಪಿ ಮತ್ತು ಎಸ್ಡಿಪಿಐ ನಡುವೆ ಮಾತ್ರ ನೇರ ಸ್ಪರ್ಧೆ ನಡೆಯುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆಸಿದ ಹಲವಾರು ಹಗರಣ ಮತ್ತು ಭ್ರಷ್ಟಾಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಬಿ.ಸಿ.ರೋಡು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಆಡಳಿತದಲ್ಲಿ ಪುರಸಭೆ ಸರಿಯಾಗಿ ಸಭೆ ನಡೆಸಿಲ್ಲ, ಬದಲಾಗಿ ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಸ್ವತಃ ಆಡಳಿತ ಪಕ್ಷದ ಸದಸ್ಯರಾಗಿದ್ದ ಅಧ್ಯಕ್ಷ ಸದಾಶಿವ ಬಂಗೇರ ಲಿಖಿತ ಹೇಳಿಕೆಯಲ್ಲಿ ಪುರಸಭೆಗೆ ತಿಳಿಸಿದ್ದಾರೆ ಎಂದರು.
ಕಳೆದ ಅವಧಿಯಲ್ಲಿ ಬಿಜೆಪಿ ಐವರು ಸದಸ್ಯರು ಅಲ್ಲಿನ ಗೌರವಧನ ಸಹಿತ ನೀರು ಮತ್ತು ಊಟೋಪಚಾರ ಸ್ವೀಕರಿಸದೆ ಎಲ್ಲಾ ಭ್ರಷ್ಟಾಚಾರ ಬಯಲಿಗೆ ಎಳೆದಿದ್ದಾರೆ. ಈ ಎಲ್ಲಾ ಕರ್ಮಕಾಂಡಗಳ ಬಗ್ಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ತಿಳಿದಿಲ್ಲವೇ…? ಎಂದು ಪ್ರಶ್ನಿಸಿದರು.
ರೂ.1.39ಲಕ್ಷ ವೆಚ್ಚದ ಟ್ರೀಪಾರ್ಕ್, ರೂ 30ಲಕ್ಷ ವೆಚ್ಚದ ಜೋಡುಮಾರ್ಗ ಉದ್ಯಾನವನ ನಿರ್ಮಿಸಲು ರೂ 1.39 ಕೋಟಿ ಅನುದಾನ ವಿನಿಯೋಗಿಸಿ ಅಲ್ಲಿನ ಕಾವಲುಗಾರರ ಕಚೇರಿಗೆ ರೂ 10ಸಾವಿರ ವೆಚ್ಚದಲ್ಲಿ ಅಳವಡಿಸಿದ ಒಂದು ಫ್ಯಾನು ಮತ್ತು ಒಂದು ಟ್ಯೂಬ್ಲೈಟಿನ ಖರ್ಚು ತೋರಿಸಿರುವುದು ಭ್ರಷ್ಟಾಚಾರಕ್ಕೆ ಉದಾಹರಣೆಯಾಗಿದೆ.
ಪ್ರತೀ ತಿಂಗಳು 6,500 ಮನೆಗಳಿಂದ ತಲಾ ರೂ. 30ಕ್ಕೆ ಬದಲಾಗಿ ರೂ 50 ಮೊತ್ತ ವಸೂಲಿ ಮಾಡುತ್ತಿರುವ ಮಾಜಿ ಸಚಿವರ ಆಪ್ತ ಗುತ್ತಿಗೆದಾರ ಮಂಗಳೂರಿನ ಎಮ್ಮೆಕೆರೆ ಸಲಾಂ ಅವರಿಗೆ ಮಾಸಿಕ ರೂ 6ಲಕ್ಷ ಮೊತ್ತ ಪಾವತಿಸುತ್ತಿದ್ದಾರೆ. ಮಾತ್ರವಲ್ಲದೆ ಪುರಸಭೆ ವತಿಯಿಂದಲೇ ಮೂರು ಪ್ರತ್ಯೇಕ ವಾಹನ ಒದಗಿಸಿದ್ದರೂ ತ್ಯಾಜ್ಯ ನಿರ್ವಹಣೆಯಾಗಿಲ್ಲ. 36 ಮಂದಿ ನಕಲಿ ಕಾರ್ಮಿಕರ ಹೆಸರಿನಲ್ಲಿ ಗುತ್ತಿಗೆದಾರರು ಪಿಎಫ್ಐ, ಇಎಸ್ಐ ಸೌಲಭ್ಯ ನೀಡಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ರೂ 12 ಕೋಟಿ ಮೊತ್ತದ ಒಳಚರಂಡಿ ಕಾಮಗಾರಿ ಸಮರ್ಪಕವಾಗಿ ನಡೆಸದಿದ್ದರೂ ಮತ್ತೆ ರೂ 54 ಕೋಟಿ ಮೊತ್ತದ ಅನುದಾನ ಒಳಚರಂಡಿ ಕಾಮಗಾರಿಗೆ ಮಂಜೂರಾಗಿದೆ ಎನ್ನುತ್ತಿದ್ದಾರೆ ಎಂದು ತಿಳಿಸಿದರು.
ಇಲ್ಲಿನ ಕೈಕಂಬ ಸಮೀಪದ ಮಫತ್ಲಾಲ್ ಲೇಔಟ್ನಲ್ಲಿ ಒಟ್ಟು 12.85 ಎಕ್ರೆ ಜಮೀನಿನಲ್ಲಿ 1.7 ಎಕ್ರೆ ಜಮೀನು ಅಂದಿನ ಪುರಸಭಾಧ್ಯಕ್ಷೆ ಜೊಹರಾ ರಹಿಮಾನ್, ತಹಶೀಲ್ದಾರ್ ಕೃಷ್ಣಪ್ಪ ಪೂಜಾರಿ, ಉಪ ನೋಂದಣಾಧಿಕಾರಿ ಸವಿತಾ ಅವರಿಗೆ ನಿವೇಶನ ಹಂಚಿಕೆ ಮಾಡಿರುವುದು ಭ್ರಷ್ಟಾಚಾರ ಅಲ್ಲವೇ…? ಎಂದು ಪ್ರಶ್ನಿಸಿದರು.
ಇನ್ನು ನಿರ್ಮಲ ಬಂಟ್ವಾಳ ಯೋಜನೆಯಡಿ ರೂ 25.16 ಲಕ್ಷ ವೆಚ್ಚದಲ್ಲಿ ಖರೀಸಿದ 16ಸಾವಿರ ಪ್ಲಾಸ್ಟಿಕ್ ಬಕೇಟುಗಳ ಪೈಕಿ 6 ಸಾವಿರ ಬಕೇಟುಗಳು ಪುರಸಭೆಯ ದಾಸ್ತಾನಿನಲ್ಲಿ ಕೊಳೆಯುತ್ತಿದೆ ಎಂದರು.
ಕೊಟ್ರಮಣ ಗಂಡಿ ಎಂಬಲ್ಲಿ ನಿರ್ಮಿಸಿದ ರೂ 8ಲಕ್ಷ ವೆಚ್ಚದ ಬಸ್ ನಿಲ್ದಾಣ ಕಳೆದ ಏಳು ವರ್ಷಗಳಿಂದ ಪಾಳು ಬಿದ್ದರೂ ಈಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಎಂಆರ್ಪಿಎಲ್ ವತಿಯಿಂದ ನಿರ್ಮಿಸಿದ ಶೌಚಾಲಯಕ್ಕೆ ಮರುದಿನವೇ ಬೀಗ ಬಿದ್ದಿದೆ ಎಂದು ಟೀಕಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ನೆಪದಲ್ಲಿ ಅಧಿಕಾರಿಗಳೊಂದಿಗೆ ದರ್ಪದಿಂದ ವರ್ತಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಈ ಹಿಂದೆ ಅದೆಷ್ಟು ಅಧಿಕಾರಿಗಳನ್ನು ಮನೆಗೆ ಕರೆಸಿ ದಬಾಯಿಸಿದ್ದಾರೆ ಎಂದು ಆರೋಪಿಸಿದರು. ಪುತ್ತೂರು ನಗರಸಭೆಯಲ್ಲಿ ಒಟ್ಟು 31 ಸ್ಥಾನಗಳ ಪೈಕಿ ಒಬ್ಬರಿಗಾದರೂ ಬಿಲ್ಲವರಿಗೆ ಸೀಟು ನೀಡಿದ್ದಾರೆಯೇ…? ಇದಕ್ಕೆ ಅವರು ಉತ್ತರಿಸಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ಜಿ.ಆನಂದ, ಸುಲೋಚನಾ ಜಿ.ಕೆ.ಭಟ್, ಕಮಲಾಕ್ಷಿ ಕೆ.ಪೂಜಾರಿ, ಸುಲೋಚ ಜಿ.ಕೆ.ಭಟ್, ಎ. ಗೋವಿಂದ ಪ್ರಭು, ಮೋನಪ್ಪ ದೇವಸ್ಯ ಮತ್ತಿತರರು ಉಪಸ್ಥಿತರಿದ್ದರು.
