ಗುರುಪುರ : ಗುರುಪುರ ಗ್ರಾಮ ಪಂಚಾಯತಿನಲ್ಲಿ ಸೋಮವಾರ ನಡೆದ 2018-19ರ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ 10 ಇಲಾಖೆಗಳ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಹಾಗೂ ಸ್ಥಳೀಯ ಸಂಸ್ಥೆಯೊಂದು ಪರಿಸರ ಸ್ವಚ್ಚತೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿತು.
ಕಂದಾಯ ಇಲಾಖೆಯ ಮಂಜುಳಾ ನಾಯ್ಕ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದಾಗ 94ಸಿಸಿ ವಿಷಯದಲ್ಲಿ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳು ಮತ್ತು ಅಕ್ರಮಗಳ ಬಗ್ಗೆ ಗ್ರಾಮನಿವಾಸಿ ಮುಸ್ತಫ ಹಾಗೂ ಇತರರು ದೂರಿಕೊಂಡರು. ಈವರೆಗೆ ಅಂತಹ ಅವ್ಯವಹಾರಗಳು ನಡೆದಿಲ್ಲ. ಒಂದು ವೇಳೆ ಹಿಂದೆ ಹಾಗೇನಾದರೂ ಆಗಿದ್ದರೆ ಅದನ್ನು ತನಿಖೆ ಮಾಡಲಾಗುವುದು ಎಂದು ನಾಯ್ಕ್ ಭರವಸೆ ನೀಡಿದರು.
ಸ್ಥಳೀಯ ದಿಶಾ ಸಂಸ್ಥೆಯ ಅಧಿಕಾರಿ ವಾಲ್ಟರ್ ತ್ಯಾಜ್ಯ ಮತ್ತು ಪರಿಸರ ಸ್ವಚ್ಚತಾ ವಿಷಯದಲ್ಲಿ ಸಾರ್ವಜನಿಕರಿಗೆ ಮನಮುಟ್ಟುವಂತೆ ಮಾತನಾಡಿದರು. ಕಸ ಎಲ್ಲೆಂದರಲ್ಲಿ ಎಸೆಯುವುದರಿಂದ ಮುಂದೊಂದು ನಾವೇ ಸಮಸ್ಯೆ ಎದುರಿಸಬೇಕಾಗುತ್ತದೆ. ಕಸ ಪಂಚಾಯತ್ ಸಮಸ್ಯೆ ಅಲ್ಲ. ಅದು ಪ್ರತಿಯೊಬ್ಬರ ವೈಯಕ್ತಿಕ ಸಮಸ್ಯೆಯಾಗಿದ್ದು, ನಿರ್ದಿಷ್ಟ ವ್ಯವಸ್ಥೆಯಡಿ ಕಸ ವಿಲೇವಾರಿಗೆ ಮುಂದಾದಲ್ಲಿ ಭವಿಷ್ಯದಲ್ಲಿ ಸಮಸ್ಯೆಯಾಗದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಭಾರತಿ, ಸಾಮಾಜಿಕ ಪಿಡುಗಗಳ ಬಗ್ಗೆ ಮಾತನಾಡುತ್ತ, ಸರ್ಕಾರ ಬಾಲ್ಯವಿಹಾರ ತಡೆಗೆ ಕಾನೂನು ರೂಪಸಿದ್ದು, ಹೆಣ್ಮಕ್ಕಳ ದೌರ್ಜನ್ಯ ಹಾಗೂ ಶೋಷಣೆಯಂತಹ ಘಟನೆಗಳ ಬಗ್ಗೆ ದೂರಿಕೊಳ್ಳಲು ಅವಕಾಶವಿದ್ದು, ಆರೋಪಿಗಳಿಗೆ ಕಾನೂನಿನಲ್ಲಿ ಶಿಕ್ಷೆ ಗೊತ್ತುಪಡಿಸಲಾಗಿದೆ. ಅಂತೆಯೇ ಕೇಂದ್ರದ ಬೇಟಿ ಬಚಾವೋ ಬೇಟಿ ಪಡಾವೋ, ಅಂಚೆ ಇಲಾಖೆಯಲ್ಲಿ ಹೆಣ್ಮಕ್ಕಳಿಗಾಗಿರುವ ಸುಕನ್ಯಾ ಖಾತ್ರಿ ಯೋಜನೆ, ಗರ್ಣಿಣಿಯರಿಗೆ ಅಂಗನವಾಡಿಯಲ್ಲಿ ಲಭ್ಯವಿರುವ ಸೇವೆಗಳ ಮಾಹಿತಿ ನೀಡಿದರು.
14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಮತ್ತು ಸ್ಕಾಲರ್ಶಿಪ್ ಮಾಹಿತಿ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿ ಗ್ರೆಟ್ಟಾ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಾಕಷ್ಟು ಸವಲತ್ತುಗಳಿದ್ದರೂ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಉಳಿದಂತೆ ತೋಟಗಾರಿಕೆ ಇಲಾಖೆ ಮಹೇಶ್, ಪಂಚಾಯತ್ ರಾಜ್ ಇಂಜಿನಿಯರ್ ಪ್ರದೀಪ್, ವೈದ್ಯಾಧಿಕಾರಿ ಡಾ. ಅಮಿತ್ರಾಜ್, ಪಶು ಇಲಾಖೆಯ ಡಾ. ಶಿವಣ್ಣ, ಗುರುಪುರ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಪ್ರಭಾ ಪಿ ರಾವ್ ಸೂಕ್ತ ಮಾಹಿತಿ ನೀಡಿದರು.
ಕೃಷಿಕರಿಗೆ ಸರ್ಕಾರದಿಂದ ಹಲವಾರು ವಿಧದ ಸಹಾಯಧನ ಲಭ್ಯವಿದೆ. ಆದರೆ ಹಳ್ಳಿಪ್ರದೇಶದ ಕೃಷಿಕರು ಇದರ ಲಾಭ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಗ್ರಾಮ ಪಂಚಾಯತಿನೊಂದಿಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಸುಲಭವಾಗಿ ನಮ್ಮ ಹಕ್ಕು ಪಡೆದುಕೊಳ್ಳಬಹುದು. ಸ್ವಚ್ಚತೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಇತರರ ಮೇಲೆ ಗೂಬೆ ಕೂರಿಸುವುದು ಬೇಡ. ತ್ಯಾಜ್ಯ ವಿಷಯದಲ್ಲಿ ಅಗತ್ಯವೆಂದಾದರೆ ತಪ್ಪಿತಸ್ಥರ ವಿರುದ್ಧ ಗ್ರಾಪಂ ಮೂಲಕ ಎಫ್ಐಆರ್ ದಾಖಲಿಸೋಣ ಎಂದು ಜಿ.ಫಂ .ಸದಸ್ಯ ಯು.ಪಿ ಇಬ್ರಾಹಿಂ ಹೇಳಿದರು.
ವೇದಿಕೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅಬೂಬಕ್ಕರ್ ಗ್ರಾಮಸ್ಥರ ಸಂದೇಹಗಳಿಗೆ ಉತ್ತರಿಸಿದರು. ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್ ಹಾಗೂ ಪಂಚಾಯತ್ ಸದಸ್ಯರು ಇದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ನೋಡೆಲ್ ಅಧಿಕಾರಿಯಾಗಿದ್ದರು. ಗ್ರಾಪಂ ಕಾರ್ಯದರ್ಶಿ ಯಮುನಪ್ಪ ಕೊರವರ್ ವಂದಿಸಿದರು
