ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕಳ ಗ್ರಾಮದ ಹೊಸಮನೆ ನಿವಾಸಿ ಗೋಪಾಲ ಗೌಡ ಅವರ ಪತ್ನಿ, ಮಡಂತ್ಯಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ತುಂಗಾ ಗೋಪಾಲ್(45) ಹಾವು ಕಡಿದು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮೃತರಿಗೆ ಪತಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ಕಳೆದ ಜು. 30ರಂದು ಸಂಜೆ ಮನೆ ಸಮೀಪದ ಅಡಿಕೆ ತೋಟದಲ್ಲಿ ಅವರು ಕೆಲಸ ಮಾಡುತ್ತಿದ್ದ ವೇಳೆ ವಿಷಕಾರಿ ಹಾವು ಕಚ್ಚಿತ್ತು. ತಕ್ಷಣವೇ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ವನಿತಾ ಸಮಾಜದ ಸದಸ್ಯೆ ಮತ್ತು ಮಂಜಲಪಲ್ಕೆ ಜೈ ಹನುಮಾನ್ ಭಜನಾ ಮಂದಿರದ ಕಾರ್ಯದರ್ಶಿಯಾಗಿದ್ದರು.
