ಬಂಟ್ವಾಳ: ಕಳೆದ 1974ರ ಬಳಿಕ ಎರಡನೇ ಬಾರಿಗೆ ಗುರುವಾರ ರಾತ್ರಿ ಇಲ್ಲಿನ ನೇತ್ರಾವತಿ ನದಿಯಲ್ಲಿ ಉಕ್ಕಿ ಹರಿದ ನೆರೆಯಿಂದ ಪಾಣೆಮಂಗಳೂರಿನಲ್ಲಿ ಬಿ.ಸಿ.ರೋಡು-ಪಾಣೆಮಂಗಳೂರು ಸಂಪರ್ಕಿಸುವ ‘ಶತಾಯುಷಿ ಹಳೆ ಸೇತುವೆ’ಗೆ ಮತ್ತೆ ಕುಸಿತದ ಭೀತಿ ಎದುರಾಗಿದೆ.

ಈ ಬಗ್ಗೆ ಗುರುವಾರ ರಾತ್ರಿ ಸ್ಥಳೀಯ ಕೆಲವೊಂದು ವ್ಯಕ್ತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡಿದೆ. ಇದರಿಂದಾಗಿ ನಗರ ಠಾಣೆ ಮತ್ತು ಸಂಚಾರಿ ಠಾಣೆ ಪೊಲೀಸರು ಧಾವಿಸಿ ಬಂದು ರಾತ್ರಿ 11 ಗಂಟೆ ಬಳಿಕ ಸೇತುವೆ ಎರಡೂ ಬದಿ ಬ್ಯಾರಿಕೇಡ್ ಅಳವಡಿಸಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವಾಹನ ಸಂಚಾರ ಸ್ಥಗಿತಗೊಳಿಸಿ ಬಳಿಕ ಶುಕ್ರವಾರ ಬೆಳಿಗ್ಗೆ ಎಂದಿನಂತೆ ಮತ್ತೆ ಪುನರಾರಂಭಗೊಂಡಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಎಲ್‍ಎಂಡ್‍ಟಿ. ಕಂಪೆನಿಯು ಹೊಸ ಅಣೆಕಟ್ಟೆಯ ನಾಲ್ಕು ಆಧಾರಸ್ತಂಭತನಕ ಕೆಳಭಾಗದಲ್ಲಿ ಮತ್ತೆ ಹೊಸ ಅಣೆಕಟ್ಟೆ ನಿರ್ಮಿಸಲು ಕಾಮಗಾರಿ ಆರಂಭಿಸಿದ ಪರಿಣಾಮ ನೆರೆ ನೀರು ತಿರುಗಿ ಸುಳಿ ಆಕಾರದಲ್ಲಿ ಬಂದು ಹಳೆ ಸೇತುವೆ ಕೆಳಗೆ ಆಧಾರ ಸ್ತಂಭಗಳಿಗೆ ಭಾರೀ ಹೊಡೆತ ನೀಡುತ್ತಿದೆ ಎಂಬ ಆರೋಪ ಸ್ಥಳೀಯರದ್ದು.
ಇನ್ನೊಂದೆಡೆ ಕಳೆದ 2001-02ನೇ ಸಾಲಿನಲ್ಲಿ ವ್ಯಾಪಕವಾಗಿ ನಡೆದ ಅದಿರು ಸಾಗಾಟದಿಂದ ಸೇತುವೆಯ ಎರಡು ಆಧಾರ ಸ್ಥಂಭಗಳಿಗೆ ಹಾನಿಯಾಗಿದೆ. ಇದರಿಂದಾಗಿ ಅಂದಿನ ಜಿಲ್ಲಾಧಿಕಾರಿ ಚಿನ್ನಪ್ಪ ಗೌಡರು ಘನ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿ ಸೇತುವೆ ನಿರ್ವಹಣೆ ಜವಾಬ್ದಾರಿಯನ್ನು ಕೂಡಾ ಜಿಲ್ಲಾಡಳಿತದಿಂದ ಇಲ್ಲಿನ ಪುರಸಭೆಗೆ ಹಸ್ತಾಂತರಿಸಿದ್ದಾರೆ. ಈ ಸೇತುವೆ ದುರ್ಬಲವಾಗಿದ್ದು, ಘನವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ನಾಮಫಲಕವನ್ನೂ ಅಳವಡಿಸಲಾಗಿದೆ. ಆದರೆ ಪ್ರತಿನಿತ್ಯ ಖಾಸಗಿ ಬಸ್ ಸಹಿತ ಲಾರಿ ಮತ್ತಿತರ ಘನ ವಾಹನ ಸಂಚಾರ ಎಗ್ಗಿಲ್ಲದೆ ನಡೆಯುತ್ತಿದ್ದು, ಸೇತುವೆ ನಿರ್ವಹಣೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ತಾಲ್ಲೂಕಿನ ಅರಳ ಗ್ರಾಮದ ಮುಲಾರಪಟ್ನ ಸೇತುವೆ ಕೂಡಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕುಸಿದು ಬಿದ್ದಿದೆ. ಕಳೆದ ಬೇಸಿಗೆಯಲ್ಲಿ ಇಲ್ಲಿಯೂ ಹಲವಾರು ಮರಳು ಲಾರಿ ರಾತ್ರಿ-ಹಗಲು ಸಂಚಾರ ನಡೆಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ 1914ರಲ್ಲಿ ಗುಣಮಟ್ಟದ ಕಬ್ಬಿಣ ಬಳಸಿ ಬ್ರಿಟೀಷ್ ಕಂಪೆನಿ ನಿರ್ಮಿಸಿದ್ದ ಈ ಸೇತುವೆಯಲ್ಲಿ ಪಿಡಬ್ಲ್ಯೂಡಿ ಮದ್ರಾಸ್ ಎಂಬ ಮುದ್ರೆ ಹಾಕಿರುವುದು ಗಮನ ಸೆಳೆಯುತ್ತಿದೆ. ಈ ಸೇತುವೆ ಎರಡೂ ಬದಿ ಬಿಎಸ್‍ಎನ್‍ಲ್ ಸೇರಿದಂತೆ ಖಾಸಗಿ ತಂತಿ ಮತ್ತು ಕುಡಿಯುವ ನೀರಿನ ಪೈಪ್‍ಲೈನ್ ಹಾದು ಹೋಗಿ ಸೇತುವೆಗೆ ಮತ್ತಷ್ಟು ಭಾರ ಹೊರೆಸಿದೆ. ಇಲ್ಲಿನ ನಾಗರಿಕರ ಆಗ್ರಹದಂತೆ ಈ ಸೇತುವೆ ಗುಣಮಟ್ಟ ಪರಿಶೀಲನೆ ನಡೆಸಲು ಪಿಡಬ್ಲ್ಯುಡಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಈ ಸೇತುವೆಯಲ್ಲಿ ಘನ ವಾಹನ ಸಂಚಾರ ನಡೆಸದಂತೆ ನಾಮಫಲಕ ಅಳವಡಿಸಿದ್ದರೂ ಘನ ವಾಹನ ಸಂಚರಿಸಿ ದುಸ್ಸಾಹದಿಂದ ಉಂಟಾಗುವ ದುರಂತಕ್ಕೆ ಅವರೇ ಹೊಣೆಗಾರರಾಗುತ್ತಾರೆ ಎಂದು ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಎಚ್ಚರಿಸಿದ್ದಾರೆ.
