ಬಂಟ್ವಾಳ: ಇಲ್ಲಿನ ಮೆಲ್ಕಾರ್ ಸಮೀಪದ ಬೋಳಂಗಡಿ ಎಂಬಲ್ಲಿ ಮನೆಯೊಂದರ ಜಗುಲಿಯಲ್ಲಿ ಕುಳಿತಿದ್ದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ನಗರ ಪೊಲೀಸ್ ಆಣೆಗೆ ದೂರು ಸಲ್ಲಿಸಿದ ಘಟನೆ ಸೋಮವಾರ ನಡೆದಿದೆ.

ಇಲ್ಲಿನ ನಿವಾಸಿ ಮಾಸ್ರೆಲ್ ಲೂವಿಸ್ ಮತ್ತು ಅವರ ಪತ್ನಿ ಪೆಲ್ಸಿನ್ ಡಿಕುನ್ಹಾ ತೀರಿಕೊಂಡ ಬಳಿಕ ಮೃತರ ಮಕ್ಕಳ ಸಲಹೆಯಂತೆ ಈ ಮನೆಯಲ್ಲಿ ದಿವಂಗತ ಡೆನ್ನಿಸ್ ಡಿಸೋಜ ಎಂಬವರ ಪತ್ನಿ ರೀಟಾ ಡಿಸೋಜ ವಾಸವಾಗಿದ್ದಾರೆ. ಈ ನಡುವೆ ಸ್ಥಳೀಯ ನಿವಾಸಿ ನೀಲಮ್ಮ ಎಂಬವರು ಮನೆ ಕೆಲಸಕ್ಕಾಗಿ ಹೊರಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಅವರ ತಾಯಿ ಕಮಲಮ್ಮ (80) ಕೂಡಾ ರೀಟಾ ಡಿಸೋಜ ಅವರೊಂದಿಗೆ ಇರುತ್ತಿದ್ದರು. ಕಳೆದ ಸೋಮವಾರ ಸಂಜೆ ಮನೆಯ ಜಗುಲಿಯಲ್ಲಿ ಕುಳಿತಿದ್ದ ಕಮಲಮ್ಮ ಅವರು ಬಳಿಕ ನಾಪತ್ತೆಯಾಗಿದ್ದು, ಹಲವಾರು ಕಡೆಗಳಲ್ಲಿ ವಿಚಾರಿಸಿದರೂ ಅವರು ಕಾಣಲಿಲ್ಲ ಎಂದು ಆರೋಪಿಸಿ ರೀಟಾ ಡಿಸೋಜ ಅವರು ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಕೂಡಲೇ ನಗರ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ವಿನಂತಿಸಿಕೊಂಡಿದ್ದಾರೆ.
