ಕೈಕಂಬ: ರಾಜಕೀಯ, ಧರ್ಮದ ಹೆಸರಲ್ಲಿ ಕೋಮುದ್ವೇಷ ಹುಟ್ಟಿಸಲಾಗುತ್ತದೆ. ಸ್ವತಂತ್ರ ಭಾರತದಲ್ಲಿ ಜಾತ್ಯತೀತ ದೇಶಕಟ್ಟುವ ಕೆಲಸಕ್ಕೆ ಅಡಚಣೆಗಳು ಉಂಟಾಗುತ್ತಿವೆ. ಜಾತಿ, ಧರ್ಮ ಬೇಧ ಮರೆತು ಶಾಂತಿಯುತ ಸಹಬಾಳ್ವೆ ನಡೆಸುವುದೇ ಸ್ವಾತಂತ್ರ್ಯಕ್ಕೆ ನಾವು ಕೊಡುವ ನಿಜವಾದ ಗೌರವ ಎಂದು ಗುರುಪುರ `ಮೆಟ್ರೋ’ ಉದ್ಯಮಿ ಸಾಹುಲ್ ಹಮೀದ್ ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯೋತ್ಸವ ದಿನಾಚರಣೆಯಂಗವಾಗಿ ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯ ಗುರುಪುರ ಕೈಕಂಬ ಗಣೇಶಕಟ್ಟೆಯಲ್ಲಿ ಆಯೋಜಿಸಿದ `ಫ್ರೀಂಡಂ ಸ್ಕ್ವಾರ್’ ಕಾರ್ಯಕ್ರಮ ಉದ್ಘಾಟಿಸಿ ಸಾಹುಲ್ ಮಾತನಾಡಿದರು. ಈ ಸಂದರ್ಭದಲ್ಲಿ ನೆರೆದ ಕಾರ್ಯಕರ್ತರು ಚೌಕಾಕೃತಿ(ಸ್ಕ್ವಾರ್) ರಚಿಸಿ, ಸೌಹಾರ್ದಯುತ ನೆಲೆಯಲ್ಲಿ ದೇಶ ಕಟ್ಟುವ ಬಗ್ಗೆ ಪ್ರಮಾಣ ಸ್ವೀಕರಿಸಿದರು.
ಮನಸ್ಸಿನಲ್ಲಿ ರಾಗ-ದ್ವೇಷ ಇರುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ರಾಗ-ದ್ವೇಷ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತದೆ. ದ್ವೇಷದಿಂದ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯವಿಲ್ಲ. ಮಕ್ಕಳಿಗೆ ದೇಶಭಕ್ತಿ, ಮಾತೃಭಕ್ತಿಯ ನೈತಿಕ ಶಿಕ್ಷಣ ನೀಡಬೇಕು ಎಂದು ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮಿ ಅಭಿಪ್ರಾಯಪಟ್ಟರು.
ಹಿರಿಯ ವ್ಯಕ್ತಿ ಮಳಲಿ ಗಣಪ ನಾಯ್ಕ್ ಮಾತನಾಡುತ್ತ, ದೇಶವಾಸಿಗಳು ಅನ್ಯೋನ್ಯವಾಗಿ ಬದುಕಿದಾಗ ದೇಶ ಬಲಿಷ್ಠವಾಗಲಿದೆ. ಧರ್ಮದ ಹೆಸರಲ್ಲಿ ಕಚ್ಚಾಟ ಸಲ್ಲದು. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ನೆರವಾಗುವ ರೀತಿಯಲ್ಲಿ ಸಹೋದರತ್ವದಿಂದ ಬದುಕಬೇಕು ಎಂದರು.
ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅಬ್ದುಲ್ ರಶೀದ್ ರಹ್ಮಾನಿ, ರಾಜಕೀಯ ಹಿತಾಸಕ್ತಿರಹಿತ ಧಾರ್ಮಿಕ ಚಿಂತನೆಯೊಂದಿಗೆ ಯುವಜನರ ಸಂಘಟಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಎಸ್ಕೆಎಸ್ಸೆಸ್ಸೆಫ್ ವಿಜ್ಞಾನ, ವಿನಯ ಮತ್ತು ಸೇವೆಯ ಧ್ಯೇಯ ಹೊಂದಿದೆ. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ಜಾತ್ಯತೀತ ರಾಷ್ಟ್ರವಾಗಿದ್ದು, ಅದು ಮುಂದುವರಿಯಬೇಕು. ಸ್ವಾತಂತ್ರ್ಯೋತ್ಸವದಂದೂ ನಾವು ಭೀತಿ ವಾತಾವರಣದಲ್ಲಿ ಕಾರ್ಯಕ್ರಮ ನಡೆಸುವಂತಹ ಪರಿಸ್ಥಿತಿ ಇರುವುದು ದುರಂತ. ಎಲ್ಲರೂ ಮುಕ್ತವಾಗಿ ಜೀವಿಸುವ ದಿನಗಳಿಗಾಗಿ ನಾವೆಲ್ಲರೂ ಕೈಜೋಡಿಸೋಣ ಎಂದರು.
ಎಸ್ಕೆಎಸ್ಸೆಸ್ಸೆಎಫ್ ಕೈಕಂಬ ವಲಯ ಅಧ್ಯಕ್ಷ ಟಿ. ಪಿ ಜಮಾಲುದ್ದೀನ್ ದಾರಿಮಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ `ತ್ವಲಬಾ ಟ್ವೀಟ್’ ಫ್ರೀಡಂ ಸ್ಕ್ವಾರ್ ವಿಶೇಷಾಂಕ-2018 ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಶರೀಫ್ ದಾರಿಮಿ, ಜಾಕಿರ್, ಅಬ್ದುಲ್ ಅಝೀಝ್ ಭಾಷಾ, ಆದಂ ಮುಸ್ಲಿಯಾರ್, ಇಬ್ರಾಹಿಂ ನವಾಜ್ ಮೊದಲಾದವರು ಇದ್ದರು. ಎಸ್ಕೆಎಸ್ಸೆಸ್ಸೆಫ್ ಕೈಕಂಬ ವಲಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಆರೀಫ್ ಕಮ್ಮಾಜೆ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಜಾಕ್ ಕಲಾಯಿ ವಂದಿಸಿದರು
