ಗುರುಪುರ : ಒಂದು ಕಾಲದಲ್ಲಿ ಸಂವೃದ್ಧಿಯಿಂದ ಕೂಡಿದ್ದ ನಮ್ಮ ಸಂಸ್ಕøತಿ ಈಗ ಪಾಶ್ಚಾತ್ಯ ಪ್ರಭಾವದಿಂದ ಕಳೆಗುಂದುತ್ತಿದೆ. ಪಾಶ್ಚಾತ್ಯ ಅನುಕರಣೆಯಿಂದ ತುಳು ಭಾಷೆ ಉಳಿಯುತ್ತದೋ ಎಂಬ ಭೀತಿ ಉಂಟಾಗಿದ್ದು ತುಳು ಭಾಷೆ, ಸಂಸ್ಕøತಿ ಉಳಿಸುವ ಪ್ರಯತ್ನವಾಗಬೇಕಿದೆ. ಈ ನಿಟ್ಟಿನಲ್ಲಿ ಬಂಟ ಸಮಾಜದ ಮಕ್ಕಳಿಗೆ ನಮ್ಮ ಸಂಸ್ಕøತಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಬೇಕು. ಬಂಟರು ಗುರುಹಿರಿಯರು, ಕುಟುಂಬ ಬಂಧುಗಳನ್ನು ಗೌರವಿಸುವ ಪರಂಪರೆ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷೆ ಮೈನಾ ಶೆಟ್ಟಿ ಹೇಳಿದರು.
ಗುರುಪುರ ಕುಕ್ಕದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ಜುಲೈ 29ರಂದು ಆಯೋಜಿಸಲಾದ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಮಾತನಾಡುತ್ತ, ದೀಪಗಳು ಹಲವಿದ್ದಾಗ ಹೆಚ್ಚು ಬೆಳಕು ಸಿಗುತ್ತದೆ. ಅಂದರೆ, ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಬಲ ಬರುತ್ತದೆ. ಮಹಿಳೆಯರಿಗೆ ಗೌರ ನೀಡಿದಲ್ಲಿ ಆ ಸಂಘ ಬೆಳೆಯುತ್ತದೆ. ಗುರುಪುರ ಬಂಟರ ಮಾತೃ ಸಂಘ ಅದಕ್ಕೊಂದು ನಿದರ್ಶನ. ಯುವಜನರು ಮಾದಕ ವ್ಯಸನಿಗಳಾಗದಂತೆ ಜಾಗೃತಿ ಮೂಡಿಸಿ, ಅವರು ಇಂತಹ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಭವಿಷ್ಯದಲ್ಲಿ ನಮ್ಮ ಸಂಸ್ಕøತಿಯ ಅವಿಭಾಗ್ಯ ಅಂಗವಾಗಿರುವ ಮಕ್ಕಳು ಬಂಟ ಸಂಸ್ಕøತಿ ಮುಂದುವರಿಸಬೇಕು ಎಂದರು.
ನಮ್ಮಲ್ಲಿರುವ ಲೋಪದೋಷ ತಪ್ಪುಗಳನ್ನು ಸರಿಪಡಿಸಿಕೊಂಡು ನಾವು ಸಶಕ್ತೀಕರಣಗೊಳ್ಳಬೇಕು. ಸಶಕ್ತೀಕರಣವೆಂದರೆ ಇನ್ನೊಬ್ಬರನ್ನು ತುಳಿದು ನಾವು ಮೇಲೆ ಹೋಗುವುದೆಂದಲ್ಲ. ಭಿನ್ನಾಭಿಪ್ರಾಯ ಸಹಜ. ಆದರೆ ಅಂತಹ ಸಂದರ್ಭದಲ್ಲೂ ಸಂಘಟನೆಯನ್ನು ಹಿಡಿದಿಟ್ಟುಕೊಂಡು ಮುನ್ನಡೆಸುವುದು ಮುಖ್ಯ. ನಾವೆಲ್ಲರೂ ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಉತ್ತಮ ಬದುಕಿನ ಬಗ್ಗೆ ಚಿಂತಿಸಬೇಕು. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ನಮ್ಮೊಳಗಿನ ದ್ವಂದ್ವ ನೀತಿಯಿಂದ ಹೊರಬರಬೇಕು ಎಂದು ಆಸರೆ ಚಾರಿಟೇಬಲ್ ಟ್ರಸ್ಟಿನ ಆಶಾಜ್ಯೋತಿ ರೈ ಹೇಳಿದರು.
ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಉದ್ಯಮಿ ಉಮೇಶ್ ಮುಂಡ, ಸಂಘದ ಅಧ್ಯಕ್ಷ ತಿಂಗುಮಾರುಗುತ್ತು ರಾಜಕುಮಾರ್ ಶೆಟ್ಟಿ, ಮಹಿಳಾ ಘಟಕದ ಕಾರ್ಯದರ್ಶಿ ರೇವತಿ ಆಳ್ವ, ಉದ್ಯಮಿ ರವಿರಾಜ್ ಶೆಟ್ಟಿ ಇದ್ದರು. ಸ್ವಾಗತಿಸಿದ ಪ್ರಶಾಂತಿ ರೈ ವಂದಿಸಿದರು. ಇದಕ್ಕಿಂತ ಮುಂಚೆ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ಚರ್ಚಾಗೋಷ್ಠಿ
ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮದ ಬಳಿಕ `ಸಮಕಾಲೀನ ಸಂದರ್ಭದಲ್ಲಿ ಬಂಟರ ಅಭಿವೃದ್ಧಿಯಲ್ಲಿ ಬಂಟ ಸಂಘಟನೆಗಳ ಕೊಡುಗೆ’ ವಿಷಯದಲ್ಲಿ ಚರ್ಚಾಗೋಷ್ಠಿ ನಡೆಯಿತು. ಇದರಲ್ಲಿ ನವನೀತ ಶೆಟ್ಟಿ ಕದ್ರಿ, ಡಾ. ಸಾಯಿಗೀತಾ ಶೆಟ್ಟಿ(ವಿಭಾಗ ಮುಖ್ಯಸ್ಥೆ, ಮಾನವಿಕಾ ವಿಭಾಗ ನಿಟ್ಟೆ ವಿದ್ಯಾಲಯ, ಮಂಗಳೂರು) ಮತ್ತು ಸತೀಶ್ ಅಡಪ ಸಂಕಬೈಲು(ಮಂಗಳೂರು ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ) ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ತಿರುವೈಲುಗುತ್ತು ರಾಜಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

