ಬಂಟ್ವಾಳ: ತಾಲೂಕಿನ ವಾಮದಪದವು ಸಮೀಪದ ಬಸ್ತಿಕೋಡಿ ಎಂಬಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಸಹಪಾಠಿ ವಿದ್ಯಾರ್ಥಿಗಳು ಬಾಲಕನಿಗೆ ಶನಿವಾರ ಹಲ್ಲೆ ನಡೆಸಿದ್ದಾರೆ. ಶಾಲೆಯಲ್ಲಿ ಹಲ್ಲೆಗೊಳಗಾದ ಬಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾವಿನಕಟ್ಟೆ ಸಮೀಪದ ಎಲ್ಪೇಲು ನಿವಾಸಿ ರತ್ನಾಕರ ಪೂಜಾರಿಯವರ ಪುತ್ರ ಅಭಿಷೇಕ್ ವಾಮದಪವು ಸಮೀಪದ ಬಸ್ತಿಕೋಡಿ ಖಾಸಗಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿಗೆ ಅದೇ ತರಗತಿಯ ಮೂವರು ವಿದ್ಯಾರ್ಥಿಗಳು ಶನಿವಾರ ಮಧ್ಯಾಹ್ನ ಶಾಲೆಯ ಕೊಠಡಿಯೊದರಲ್ಲಿ ಯಾರು ಇಲ್ಲದ ಸಮಯದಲ್ಲಿ ಹೊಟ್ಟೆ ಮತ್ತಿತರ ಕಡೆಗಳಿಗೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಈತನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಂತೆಯೇ ಕಳೆದ ಶನಿವಾರವೂ ಇದೇ ವಿದ್ಯಾರ್ಥಿಗಳು ಆತನಿಗೆ ಹಲ್ಲೆ ನಡೆಸಿದ್ದು, ಅಂದು ಗಾಯಾಳು ವಿದ್ಯಾರ್ಥಿಯ ಅಜ್ಜ ಬಸ್ತಿಕೋಡಿ ನಿವಾಸಿ ಜನಾರ್ದನ ಪೂಜಾರಿ ಅವರು ಶಾಲೆಗೆ ತೆರಳಿ ಶಿಕ್ಷಕರಲ್ಲಿ ಪ್ರಶ್ನಿಸಿದಾಗ ಅಲ್ಲಿನ ಶಿಕ್ಷಕರು ಮತ್ತು ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡದೆ ತೀರಾ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಈ ಕುರಿತು ಪುಂಜಾಲಕಟ್ಟೆ ಠಾಣೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಗಾಯಾಳು ವಿದ್ಯಾರ್ಥಿ ತಂದೆ ರತ್ನಾಕರ ಪೂಜಾರಿ ತಿಳಿಸಿದ್ದಾರೆ.
