ಬಂಟ್ವಾಳ: ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಲರ್ನರ್ಸ್ ಫೆÇೀರಂನ ವತಿಯಿಂದ ಪರಿಣಾಮಕಾರಿ ಭಾಷಣ ಕಲೆ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಜು.22ರಂದು ನಡೆಯಿತು.

ಮಾತಿನ ಕಲೆ ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಭೂಷಣವಾಗಿದ್ದು ಉತ್ತಮ ಮಾತಿನ ಕಲೆಯನ್ನು ರೂಢಿಸಿಕೊಳ್ಳುವುದು ಎಲ್ಲರಿಗೂ ಅನಿವಾರ್ಯ ಎಂದರು. ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸಲು ಪರಿಣಾಮಕಾರಿ ಭಾಷಣ ಕಲೆ ಅಗತ್ಯವಿದ್ದು ಈ ನಿಟ್ಟಿನಲ್ಲಿ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಈ ವಿಷಯವನ್ನು ಕುರಿತು ಕಾರ್ಯಾಗಾರವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಮೂಡಬಿದಿರೆ ಶ್ರೀ ಧವಳ ಕಾಲೇಜು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೋ ಅಜಿತ್ಪ್ರಸಾದ್ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಪ್ರೋ ಸತ್ಯನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳಲ್ಲಿ ಹಲವಾರು ಪ್ರತಿಭೆಗಳಿದ್ದು ಅದನ್ನು ಅಭಿವ್ಯಕ್ತಿಸಲು ವೇದಿಕೆಯನ್ನು ಕಾಲೇಜು ಒದಗಿಸುತ್ತಿದೆ. ವಿದ್ಯಾರ್ಥಿಗಳಲ್ಲಿನ ಭಾಷಣ ಕಲೆಯ ಅಭಿವ್ಯಕ್ತಿಗೆ ಇಂದಿನ ಪರಿಣಾಮಕಾರಿ ಭಾಷಣ ಕಲೆ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದು, ಪರಿಣಾಮಕಾರಿ ಭಾಷಣ ಕಲೆಯಲ್ಲಿ ತರಬೇತಿಯನ್ನು ಪಡೆಯಲು ಆಸಕ್ತರಾದ 100 ವಿದ್ಯಾರ್ಥಿಗಳನ್ನು 3 ತಂಡಗಳಾಗಿ ವಿಂಗಡಿಸಲಾಗಿದೆ. ಈ ತರಬೇತಿ ಕಾರ್ಯಾಗಾರಗಳು ಶೈಕ್ಷಣಿಕ ವರ್ಷಾಂತ್ಯದವರೆಗೆ ಮುಂದುವರಿಯುವುದು ಎಲ್ಲಾ ವಿದ್ಯಾರ್ಥಿಗಳು ಪರಿಪೂರ್ಣತೆಯನ್ನು ಪಡೆಯುವವರೆಗೆ ತರಬೇತಿಯನ್ನು ನೀಡಲಾಗುವುದು. ಎಲ್ಲಾ ವಿದ್ಯಾರ್ಥಿಗಳ ಪರಿಪೂರ್ಣತೆಯೇ ಕಾಲೇಜಿನ ಗುರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲರ್ನರ್ಸ್ ಫೋರಂನ ಸಂಯೋಜಕರಾದ ಪಾವನಿ ಪಿ., ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ. ಸುಂದ್ರೇಶ ಎನ್. ಹಾಗೂ ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕ ವಿನಯ್ ಎಂ.ಎಸ್. ಉಪಸ್ಥಿತರಿದ್ದರು.
