ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಶಾಖೆಯಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಂಪ್ಯೂಟರ್ ಮತ್ತಿತರ ಸಾಮಾಗ್ರಿ ಸುಟ್ಟು ಹೋಗಿ ಅಪಾರ ನಷ್ಟ ಉಂಟಾಗಿದೆ. 
ಕಳೆದ 25 ವರ್ಷಗಳಿಂದ ಈ ಬ್ಯಾಂಕ್ ಇಲ್ಲಿನ ರತ್ನಾವತಿ ಅವರ ಶ್ರೀದೇವಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಭಾನುವಾರ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಬ್ಯಾಂಕಿನ ಮೆನೇಜರ್ ಕಚೇರಿ ಸಹಿತ ನಾಲ್ಕು ಕಂಪ್ಯೂರ್, ಪ್ರಿಂಟರ್, ಸರ್ವರ್, ಫೋನ್, ವಿದ್ಯುತ್ ತಂತಿ ಮತ್ತಿತರ ಸಾಮಾಗ್ರಿ ಸಂಪೂರ್ಣ ಸುಟ್ಟು ಕರಕಲಾಗಿ ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಬಂಟ್ವಾಳ ಅಗ್ನಿ ಶಾಮಕ ಠಾಣೆ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಬಂದು ಬೆಂಕಿ ನಂದಿಸಿರುವುದಾಗಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
