ಕೈಕಂಬ: ವಾಮಂಜೂರು ಸಮೀಪದ ಕೆತ್ತಿಕಲ್ ಬಳಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ದುರಸ್ಥಿ ಕಾಮಗಾರಿ ನಡೆಸಿ ಕುಸಿದಿದ್ದ ರಸ್ತೆಯನ್ನು ಸರಿಪಡಿಸಲಾಯಿತು. ಇತ್ತೀಚೆಗೆ ಕೆತ್ತಿಕಲ್ ರಸ್ತೆಯ ಅಂಚಿನಲ್ಲಿ ಆಳವಾದ ಗುಂಡಿಯೊಂದು ಮೂಡಿದ್ದು, ರಸ್ತೆ ಬಿರುಕು ಬಿಟ್ಟು ಆತಂಕ ವ್ಯಕ್ತವಾಗಿತ್ತು. ಇದನ್ನು ಲೋಕೋಪಯೋಗಿ ಇಲಾಖೆಯ ವತಿಯಿಂದ ಸರಿಪಡಿಸಲಾಗಿತ್ತು.

ಕಳೆದ ಇಪ್ಪತ್ತು ವರ್ಷಗಳ ಮುಂಚೆ ಕೆತ್ತಿಕಲ್ ಗುಡ್ಡ ಕುಸಿತ ಕಂಡು ಸಂಚಾರ ನಿರ್ಬಂದಿಸಲಾಗಿತ್ತು. ಕೆತ್ತಿಕಲ್ ಗುಡ್ಡದ ಮೇಲೆ ವಾಸಿಸುತ್ತಿದ್ದವರನ್ನು ಸ್ಥಳಾಂತರಿಸಲಾಗಿತ್ತು. ಆದರೆ ಕಳೆದ ಎರಡು ವಾರಗಳ ಮುಂಚೆ ಕೆತ್ತಿಕಲ್‍ನಲ್ಲಿ ಆಳವಾದ ತೂತು ಉಂಟಾಗಿತ್ತಲ್ಲದೆ ರಸ್ತೆಯಲ್ಲಿ ಬಿರುಕು ಮೂಡಿತ್ತು. ಇದನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ರಸ್ತೆಯ ಅಡಿಭಾಗದಲ್ಲಿದ್ದ ಮೋರಿ ಮುಚ್ಚಿಹೋಗಿ ಮಳೆನೀರು ಸಂಚರಿಸಲು ಹಾದಿ ಇರಲಿಲ್ಲ. ಅದಕ್ಕಾಗಿ ರಸ್ತೆಯ ಬದಿಯಲ್ಲಿ ತೋಡು ನಿರ್ಮಿಸಿ, ಮೋರಿಯಲ್ಲಿ ನೀರು ಹಾದುಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಆದರೆ ರಸ್ತೆಯ ಮಧ್ಯೆ ಉಂಟಾಗಿದ್ದ ಬಿರುಕಿನಿಂದ ರಸ್ತೆ ಕುಸಿತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ರಸ್ತೆಯನ್ನು ಕಾಂಕ್ರೀಟಿನಿಂದ ತಾತ್ಕಾಲಿಕವಾಗಿ ರಿಪೇರಿ ಮಾಡಲಾಗಿದೆ. ಕೆತ್ತಿಕಲ್‍ನಲ್ಲಿ ಸಡಿಲವಾದ ಮಣ್ಣಿರುವುದರಿಂದ ಅಷ್ಟೊಂದು ಗಟ್ಟಿಮುಟ್ಟಾಗಿಲ್ಲ. ಆದ್ದರಿಂದ ಈ ಭಾಗ ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
