ಪೊಳಲಿ : ವಿದ್ಯೆ ಎಂಬುದು ಕೇವಲ `ಎ ಫಾರ್ ಆ್ಯಪಲ್, ಬಿ ಫಾರ್ ಬ್ಯಾಟ್, ಸಿ ಫಾರ್ ಕ್ಯಾಟ್’ಗೆ ಸೀಮಿತವಾಗಿರದೆ, ವಿದ್ಯೆ ಸಕಲ ವಿಷಯಗಳ ಜ್ಞಾನ ಪಡೆಯುವಂತಹದ್ದಾಗಿರಬೇಕು. ಪಾಶ್ಚಾತ್ಯ ಪ್ರಭಾವದಿಂದ ಈಗ ನಮ್ಮ ಶಿಕ್ಷಣ ಪದ್ಧತಿ ಸೀಮಿತ ಚೌಕಟ್ಟಿಗೆ ಮೀಸಲಾಗಿದೆ ಎಂದು ಮಾಹೆ ವಿವಿ ನಿವೃತ್ತ ಉಪ-ಕುಲಪತಿ ಡಾ. ಬಿ ಎಂ ಹೆಗ್ಡೆ ಹೇಳಿದರು.
ಪೊಳಲಿ ರಾಮಕೃಷ್ಣ ತಪೋವನ ಆಶ್ರಮದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಹೆಗ್ಡೆ, ಕಲ್ಪವೃಕ್ಷದ(ತೆಂಗಿನ ಮರ) ಬಗ್ಗೆ ಪ್ರಸ್ತಾವಿಸುತ್ತ, ತೆಂಗಿನ ಎಣ್ಣೆ ಮತ್ತು ತಾಯಿಯ ಎದೆ ಹಾಲು `ಫ್ಯಾಟ್'(ಕೊಬ್ಬು) ಒಳ್ಳೆಯದು ಎಂದು ನಾನು ಸುಮಾರು 40 ವರ್ಷಗಳ ಹಿಂದಿನಿಂದಲೂ ಹೇಳುತ್ತ ಬಂದಿದ್ದು, ನನ್ನ ಹೇಳಿಕೆಗೆ ವಿದೇಶಿಗರಿಂದ ಟೀಕೆಗಳು ಬಂದಿತ್ತು. ಆದರೆ ಈಗ ಅಮೆರಿಕದಲ್ಲೇ ತೆಂಗಿನ ಎಣ್ಣೆ ದೇಹಕ್ಕೆ ಉತ್ತಮ ಎಂದು ಹೇಳುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಸುಮಾರು 400 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಾಫ್ಟ್ವೇರ್ ಉದ್ಯಮಿ ರಾಜೇಶ್ ರಾವ್ ವೇದಿಕೆಯಲ್ಲಿ ಇದ್ದರು. ರಾಮಕೃಷ್ಣ ತಪೋವನದ ಸ್ವಾಮಿವಿವೇಕ ಚೈತನ್ಯಾನಂದ ಪ್ರಸ್ತಾವಿಕ ಮಾತನಾಡಿದರು. ಬ್ರಹ್ಮಚಾರಿ ಶೇಖರ್ ಸ್ವಾಗತಿಸಿ ಬಾಲಕಾಶ್ರಮದ ವಿದ್ಯಾರ್ಥಿ ಸುಬ್ರಹ್ಮಣ್ಯ ನಿರೂಪಿಸಿದರು.






