ಬಂಟ್ವಾಳ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಬಂಟ್ವಾಳ ರೋಟರಿ ಕ್ಲಬ್ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶುಕ್ರವಾರ ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಾಯಾಜಿ ಮೆಮೊರಿಯಲ್ ಹಾಲ್‍ನಲ್ಲಿ ನಡೆಯಿತು. ನೂತನ ಸಾಲಿನ ಅಧ್ಯಕ್ಷರಾಗಿ ಮಂಜುನಾಥ ಆಚಾರ್ಯ ನಿರ್ಗಮನ ಅಧ್ಯಕ್ಷ ಬಿ.ಸಂಜೀವ ಪೂಜಾರಿಯವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು ರೋಟರಿ ಕ್ಲಬ್‍ನ ಕಾರ್ಯಕ್ರಮಗಳು ಅವಿಸ್ಮರಣೀಯಗೊಳಿಸಲು ಎಲ್ಲಾ ಸದಸ್ಯರ ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿಕೊಂಡು ಅತ್ಯುತ್ತಮ ಯೋಜನೆಗಳನ್ನು ಅನಷ್ಠಾನಗೊಳಿಸುವ ಜೊತೆಗೆ ಸುವರ್ಣ ವರ್ಷಾಚರಣೆಯನ್ನು ಯಶಸ್ವಿಗೊಳಿಸೋಣ ಎಂದರು.

ಮಂಗಳೂರು ಗಣೇಶ್ ಬೀಡಿಯ ಆಡಳಿತ ಪಾಲುದಾರ ಜಗನ್ನಾಥ ಶೆಣೈ ಸುವರ್ಣ ವರ್ಷಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಬಂಟ್ವಾಳ ರೋಟರಿ ಕ್ಲಬ್ ಆಯೋಜಿಸುತ್ತಿರುವುದು ಅಭಿನಂದನೀಯ ಎಂದರು. ಸಮಾಜ ಸೇವೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಆದರೆ ರೋಟರಿ ಕ್ಲಬ್ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು. ಚುನಾಯಿತ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರೆವೇರಿಸಿದರು. ಅವರು ಮಾತನಾಡಿ ಸರಕಾರ ನಾಚುವಂತೆ ರೋಟರಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಈ ಹಿಂದೆ ಪೋಲಿಯೋ ನಿವಾರಣ ಅಭಿಯಾನವನ್ನು ಸ್ವಯಂ ಸೇವಾ ಸಂಸ್ಥೆಯಾದ ರೋಟರಿ ಯಶಸ್ವಿಯಾಗಿ ಮಾಡಿದೆ. ರೋಟರಿ ಸದಸ್ಯರು ತಾವು ಕಾರ್ಯನಿರ್ವಹಿಸುವ ಕ್ಷೇತ್ರಗಳಲ್ಲಿ ನಾಯಕನಾಗಿ ಹೊರಹೊಮ್ಮುತ್ತಿರುವುದು ಶ್ಲಾಘನೀಯ. ಇನ್ನೊಂದು ತಲೆಮಾರು ರೋಟರಿಯನ್ನು ಕಾಣಬೇಕಾದರೆ ನಾವೆಲ್ಲರೂ ಸಮುದಾಯದ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕಾಗಿದೆ ಎಂದರು.
ವಲಯ 4ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಕ್ಲಬ್ ಬುಲೆಟಿನ್ ಗೋಲ್ಡನ್‍ರೋಟ್‍ವಾಲ್‍ನ್ನು ಬಿಡುಗಡೆ ಮಾಡಿದರು. ವಲಯ ಲೆಫ್ಟಿನೆಂಟ್ ಬಿ.ಸಂಜೀವ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ರಿತೇಶ್ ಬಾಳಿಗ, ನಿರ್ಗಮನ ಕಾರ್ಯದರ್ಶಿ ನಾರಾಯಣ ಹೆಗ್ಡೆ ವೇದಿಕೆಯಲ್ಲಿದ್ದರು. ನಿರ್ಗಮನ ಅಧ್ಯಕ್ಷ ಸಂಜೀವ ಪೂಜಾರಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಶಿವಾನಿ ಬಾಳಿಗ ವಂದಿಸಿದರು. ಅಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು. 
ಗಮನ ಸೆಳೆದ ಲೈವ್ ಆರ್ಟ್:
ಪ್ರತಿಭಾನ್ವಿತ ಕಲಾವಿದೆ ಶಬರಿ ಗಾಣಿಗ ಅವರ ಲೈವ್ ಆರ್ಟ್ ಸಭಾಂಗಣದಲ್ಲಿ ನೆರೆದವರ ಗಮನ ಸೆಳೆಯಿತು. ಸುವರ್ಣ ವರ್ಷಚರಣೆಯ ಉದ್ಘಾಟನೆಯ ಸಂದರ್ಭ ರೋಟರಿ ಸಂಸ್ಥೆಯ ಸಂಸ್ಥಾಪಕ ಪೌಲ್ ಹ್ಯಾರೀಸ್ ಅವರ ಭಾವಚಿತ್ರವನ್ನು ಕ್ಷಣ ಮಾತ್ರದಲ್ಲಿ ಬಿಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರರು.
