ಬಂಟ್ವಾಳ: ಹುಟ್ಟಿನಿಂದ ಸಾವಿನವರೆಗೆ ನಾವು ಕಾನೂನಿನ ಪರಿದಿಯೊಳಗಿರಬೇಕು .ಬಾಲ್ಯದಿಂದ ತೊಡಗಿ ಜೀವನದ್ದುದ್ದಕ್ಕೂ ಕಾನೂನಿನ ಮಧ್ಯೆ ಇರಬೇಕಾಗುವುದರಿಂದ ಕಾನೂನಿನ ಜ್ಞಾನ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಕೆ.ಎಸ್. ಬೀಳಗಿ ಅವರು ಹೇಳಿದರು.

ಅವರು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ತಾಲೂಕು ಪಂಚಾಯತ್ ಬಂಟ್ವಾಳ ಹಾಗೂ ಸರಕಾರಿ ಇಲಾಖೆಗಳ ಸಹಯೋಗದಲ್ಲಿ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಗಾಗಿ ಶಾಲೆಯ ಸಭಾಂಗಣದಲ್ಲಿ ರವಿವಾರ ನಡೆದ ಕಾನೂನು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದ ಪ್ರತೀಹಂತದಲ್ಲೂ ನಾವು ಕಾನೂನಿಗೆ ಒಳಪಡಬೇಕು. ಕಾನೂನಿನಿಂದ ನಮ್ಮ ರಕ್ಷಣೆಯಾಗಿ ಸ್ವಸ್ಥ ಜೀವನ ನಡೆಸಲು ಸಾಧ್ಯವಾಗುವುದು ಎಂದ ಅವರು ವಿದ್ಯಾರ್ಥಿ ಜೀವನ ಸುಂದರವಾಗಿದ್ದು, ವಿದ್ಯಾರ್ಥಿಗಳು ತಮ್ಮ ಗುರಿಮುಟ್ಟುವ ಕನಸು ಕಾಣಬೇಕು. ವಿದ್ಯಾಭ್ಯಾಸಕ್ಕೆ ಹೆಚ್ಚು ಪರಿಶ್ರಮ ಪಟ್ಟಾಗ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರಾಂಶುಪಾಲ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹೊರ ಪ್ರಪಂಚದ ಜ್ಞಾನದ ಅರಿವಿಗೆ ಅವಕಾಶವಿಲ್ಲ. ಜಿಲ್ಲಾ ನ್ಯಾಯಾದೀಶರ ಉಪಸ್ಥಿತಿಯಲ್ಲಿ ಕಾನೂನು ಮಾಹಿತಿ ದೊರಕಿರುವುದು ಉತ್ತಮ ಅವಕಾಶವಾಗಿದೆ ಎಂದರು.
ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾದೀಶರಾದ ಮಹಮ್ಮದ್ ಇಮ್ತಿಯಾಜ್ಅಹಮ್ಮದ್, ನಿವೃತ್ತ ನ್ಯಾಯಾದೀಶೆ ಗೀತಾಂಜಲಿ, ಹೆಚ್ಚುವರಿ ಸಿವಿಲ್ ನ್ಯಾಯಾ„ೀಶರಾದ ಪ್ರತಿಭಾ ಡಿ.ಎಸ್., ಶಾಲಾ ಉಸ್ತುವಾರಿ ಸಮಿತಿ ಸದಸ್ಯ ಪಿ.ಜಿನರಾಜ ಆರಿಗ, ಶಿಕ್ಷಣ ಸಂಯೋಜಕಿ ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು.
ನ್ಯಾಯವಾದಿ ಶಿವಪ್ರಕಾಶ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳ ಹಕ್ಕುಗಳು ಹಾಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
