ನಗರ ಪ್ರದೇಶದಲ್ಲಿ ಖಾಯಂ ಆಗಿ ಉಳಿದುಕೊಂಡಿರುವ ಕೆಲವು ಉಪನ್ಯಾಸಕರು ಲಾಬಿ, ವಾಮಮಾರ್ಗದಿಂದ ವರ್ಗಾವಣೆ ಕೌನ್ಸೆಲಿಂಗ್ಗೆ ಅಡ್ಡಿಪಡಿಸುತ್ತಿದ್ದಾರೆಂದು ದೀನಬಂದು ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಎಂ.ರಮೇಶ್ ಇವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪನ್ಯಾಸಕರು ಅಲ್ಲಿಯೇ ತಮ್ಮ ಸೇವಾವಧಿಯನ್ನು ಮುಗಿಸಿ ನಿವೃತ್ತರಾಗುವ ಸ್ಥಿತಿಯಲ್ಲಿದ್ದವರಿಗೆ, ಕಡ್ಡಾಯ ವರ್ಗಾವಣೆ ಕಾಯಿದೆ ಗ್ರಾಮೀಣ ಪ್ರದೇಶದ ಉಪನ್ಯಾಸಕರು ನಗರ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಅವಕಾಶವನ್ನು ಒದಗಿಸಿತ್ತು. ಆದರೆ, ಹಲವು ವರ್ಷಗಳಿಂದ ಒಂದೇ ಕಡೆ ಬೇರುಬಿಟ್ಟಿರುವ ಉಪನ್ಯಾಸಕರು ವಿಧಾನಪರಿಷತ್ನ ಕೆಲವು ಸದಸ್ಯರೊಂದಿಗೆ ತೆರಳಿ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ನಿಲ್ಲಿಸಲು ಶಿಕ್ಷಣ ಸಚಿವರಿಗೆ ಒತ್ತಡ ಹೇರುತ್ತಿರುವುದು ಖಂಡನೀಯವಾಗಿದೆ. ಶೇ. 5 ರಷ್ಟು ಉಪನ್ಯಾಸಕರ ಹಿತಾಸಕ್ತಿಗಾಗಿ ಶೇ. 95 ರಷ್ಟು ಉಪನ್ಯಾಸಕರ ಹಿತಾಸಕ್ತಿಯನ್ನು ಬಲಿ ಕೊಡಬಾರದು.

ಕಳೆದ 20-25 ವರ್ಷಗಳಿಂದ ಒಂದೇ ಕಾಲೇಜು ಅಥವಾ ನಗರ ಕೇಂದ್ರಗಳಲ್ಲಿ ಶಾಶ್ವತವಾಗಿ ಬೇರೂರಿರುವ ಕೆಲವು ಪ್ರಭಾವಿ ಉಪನ್ಯಾಸಕರುಗಳು ವರ್ಗಾವಣೆ ನಿಲ್ಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಇಂತವರ ಬೆಂಬಲಕ್ಕೆ ನಿಲ್ಲದೇ ಕೂಡಲೇ ಶಿಕ್ಷಣ ಸಚಿವರು ಯಾವುದೇ ಪ್ರಭಾವ, ಲಾಬಿ, ಒತ್ತಡಗಳಿಗೆ ಮಣಿಯದೆ ಶೇ 95 ರಷ್ಟು ಉಪನ್ಯಾಸಕರ ಹಿತ ಕಾಪಾಡಬೇಕು. ಕಡ್ಡಾಯ ವರ್ಗಾವಣೆ ಕಾಯಿದೆ ಅನ್ವಯ ವರ್ಗಾವಣೆ ಪ್ರಕ್ರಿಯೇ ನಿಯಮಾನುಸಾರ ಪೂರ್ಣಗೊಳಿಸಬೇಕೆಂದು ಶಿಕ್ಷಣಸಚಿವರನ್ನು ಒತ್ತಾಯಿಸುತ್ತೇನೆ.
ಈಗಾಗಲೆ ಜೂನ್ 21 ರಿಂದ 24ರವರೆಗೆ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ವರ್ಗಾವಣೆ ಬಯಸಿದ್ದ ಬಹಳಷ್ಟು ಉಪನ್ಯಾಸಕರು ಈಗಾಗಲೇ ಬೆಂಗಳೂರಿಗೆ ತೆರಳಿ ಶಿಕ್ಷಣ ಇಲಾಖೆಯ ನಿರ್ಧಾರದಿಂದಾಗಿ ಬರೀ ಕೈಯಲ್ಲಿ ಹಿಂತಿರುಗವಂತಾಗಿದ್ದು ದುರದೃಷ್ಟಕರ.
