ಗುರುಪುರ: ಮಂಗಳೂರಿನಿಂದ ಎಡಪದವಿನವರೆಗೆ ರಾಷ್ಟ್ರೀಯ ಹೆದ್ದಾರಿ 169 ಕಿತ್ತೊಹೋದ ಪರಿಣಾಮ ಕಳೆದ ಆರು ತಿಂಗಳ ಮುಂಚೆ ಹಾಕಿದ್ದ ತೇಪೆ ಮಳೆಗಾಲ ಆರಂಭವಾಗುತ್ತಿದ್ದಂತೆ ಅಲ್ಲಲ್ಲಿ ತೇಪೆ ಕಿತ್ತುಹೋಗಿದೆ. ಇದರ ವಿರಾಟ್ ಸ್ವರೂಪ ಗುರುಪುರದ ಸೇತುವೆಯ ಬಳಿ ಕಾಣಿಸಿಕೊಂಡಿದ್ದು, ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಳೆದ ಆರು ತಿಂಗಳ ಮುಂಚೆ ರಾಷ್ಟ್ರೀಯ ಹೆದ್ದಾರಿ 169ನಲ್ಲಿ ಮಂಗಳೂರಿನಿಂದ ಎಡಪದವುವರೆಗೆ ರಸ್ತೆಗೆ ತೇಪೆ ಹಾಕಲಾಗಿತ್ತು. ಆದರೆ ಕಳಪೆ ಕಾಮಗಾರಿಯ ಪರಿಣಾಮವಾಗಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಅಲ್ಲಲ್ಲಿ ಕಿತ್ತುಹೋಗಿದ್ದು, ಹೊಂಡ ಏರ್ಪಟ್ಟಿದೆ. ಇನ್ನು ಗುರುಪುರ ಸೇತುವೆಯ ಸಮೀಪವೇ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಬಿದ್ದಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ಗುರುಪುರ ಸೇತುವೆಯಲ್ಲಿ ಏಕಕಾಲಕ್ಕೆ ಒಂದು ವಾಹನ ಮಾತ್ರ ಸಂಚರಿಸಲು ಸಾಧ್ಯವಿದೆ. ಆದ್ದರಿಂದ ವಾಹನ ಸಂಚಾರ ನಡೆಸಲು ಅಡೆಚಣೆ ಉಂಟಾಗಿದೆ. ಸೇತುವೆಯಿಂದ ಅಭಿಮುಖವಾಗಿ ವಾಹನಗಳು ಬರುವಾಗ ಇನ್ನೊಂದು ಪಾಶ್ರ್ವದ ವಾಹನಗಳು ನಿಂತುಕೊಳ್ಳುತ್ತದೆ. ಆದರೆ ಗುರುಪುರ ಸೇತುವೆಯ ಒಂದು ಪಾಶ್ರ್ವದ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ಏರ್ಪಟ್ಟು ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ವಾಹನಗಳಿಗೆ ಸೈಡ್ ಕೊಡಲು ಹೊಂಡ ತಪ್ಪಿಸಲು ಹೋಗುವ ಸಂದರ್ಭ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಸ್ವಲ್ಪ ಏಮಾರಿದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಕಳಪೆ ಕಾಮಗಾರಿ?: ಆರು ತಿಂಗಳ ಮುಂಚೆಯಷ್ಟೇ ಕಿತ್ತುಹೋದ ರಸ್ತೆಗೆ ತೇಪೆ ಹಾಕಿ ಹೊಂಡಗಳನ್ನು ಮುಚ್ಚಲಾಗಿತ್ತು. ಆದರೆ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ತೇಪೆ ಕಿತ್ತುಹೋಗುತ್ತಿರುವುದರಿಂದ ಈ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಹೊಸತಾಗಿ ನಿರ್ಮಾಣಗೊಂಡ ಹೊಂಡಗಳು ಮತ್ತಷ್ಟು ಬೆಳೆಯುವ ಸಾಧ್ಯತೆ ಇದ್ದು, ಅಪಾಯ ಸಂಭವಿಸಬಹುದು. ಆದ್ದರಿಂದ ಈ ಹೊಂಡಗಳನ್ನು ಆದಷ್ಟು ಬೇಗ ಮುಚ್ಚಿಸಿ ಜನರ ಪ್ರಾಣವನ್ನು ರಕ್ಷಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.



