ಗುರುಪುರ-ಕೈಕಂಬ: ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇಲ್ಲಿನ ಕೆಲವು ಕಡೆ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 850 ಲೋಡು ಮರಳು ಜಪ್ತಿ ಮಾಡಿರುವ ಘಟನೆ ಮಂಗಳವಾರ ವರದಿಯಾಗಿದೆ.
ಪೊಲೀಸ್ ಆಯುಕ್ತ, ಸಿಸಿಬಿ ಹಿರಿಯ ಅಧಿಕಾರಿ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಕಾರ್ಯಾಚರಣೆ ವೇಳೆ ಮೂಡುಪೆರಾರದ ಎರಡು ಕಡೆ, ಬಡಗುಳಿಪಾಡಿಯ ನಾಲ್ಕು ಕಡೆ, ನಾರ್ಲ ಪದವಿನ ಎರಡು ಕಡೆ ಹಾಗೂ ಗಂಜಿಮಠ ಒಡ್ಡೂರು ಐಟಿ ಪಾರ್ಕ್ ಬಳಿಯಲ್ಲಿ ಒಂದು ಕಡೆ ಸಹಿತ ಒಟ್ಟು ಒಂಬತ್ತು ಕಡೆ ರಾಶಿ ಹಾಕಲಾಗಿದ್ದ ಮರಳು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಬಜಪೆ ಠಾಣಾ ಪೊಲೀಸ್, ಮಂಗಳೂರಿನ ಸಿಸಿಬಿ ಘಟಕದ ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜತೆಗೆ ಸ್ಥಳೀಯ ಗ್ರಾಮ ಕರಣಿಕರು ಇದ್ದರು.
ಅಕ್ರಮ ಮರಳಿನ ಮಹಜರು ನಡೆಸಲಾದ ಬಳಿಕ ಗಣಿ ಇಲಾಖೆಗೆ ಪ್ರಕರಣ ಹಸ್ತಾಂತರಿಸಲಾಗುವುದು ಎಂದು ಬಜಪೆ ಪೊಲೀಸ್ ಮೂಲವೊಂದು ತಿಳಿದಿದೆ.
