ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ದಿನಗಳಾದರೂ ಸಚಿವ ಸಂಪುಟ ರಚನೆಯಾಗಿಲ್ಲ. ಉಭಯ ಪಕ್ಷಗಳಲ್ಲೂ ಸಚಿವ ಸ್ಥಾನಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದೇ ಇದಕ್ಕೆ ಕಾರಣ.
ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿದ್ದ ಉಭಯ ಪಕ್ಷಗಳ ನಾಯಕರು, ಕೊನೆಗೂ ಅದನ್ನು ಬಗೆಹರಿಸಿಕೊಂಡಿದ್ದಾರಾದರೂ ಸಚಿವ ಸ್ಥಾನಾಕಾಂಕ್ಷಿಗಳು ತಮಗೆ ಇಂತಹುದೇ ಖಾತೆ ಬೇಕೆಂದು ಪಟ್ಟು ಹಿಡಿದಿರುವುದು ಈಗ ತಲೆನೋವಾಗಿ ಪರಿಣಮಿಸಿದೆ.
ಎಚ್.ಡಿ. ರೇವಣ್ಣರಿಗಾಗಿಯೇ ಪಟ್ಟು ಹಿಡಿದು ಲೋಕೋಪಯೋಗಿ ಖಾತೆಯನ್ನು ಜೆಡಿಎಸ್ ಪಡೆದಿದ್ದು, ಜೊತೆಗೆ ಇಂಧನ ಖಾತೆಯನ್ನೂ ತನ್ನದಾಗಿಸಿಕೊಂಡಿತ್ತು. ಇದೀಗ ರೇವಣ್ಣ ಈ ಎರಡು ಖಾತೆಗಳು ತಮಗೆ ಬೇಕೆಂದು ಕೇಳುತ್ತಿದ್ದಾರೆನ್ನಲಾಗಿದ್ದು, ಇಂಧನ ಖಾತೆ ತಮಗೆ ನೀಡಲು ಜಿ.ಟಿ. ದೇವೇಗೌಡ ಸಹ ಪಟ್ಟು ಹಿಡಿದಿದ್ದಾರೆನ್ನಲಾಗಿದೆ.
ಸಚಿವ ಸ್ಥಾನ ಹಂಚಿಕೆ ಮಾಡುವಲ್ಲಿ ಸಾಕಷ್ಟು ಸುಸ್ತಾಗಿರುವ ಜೆಡಿಎಸ್ ನಾಯಕರಿಗೆ, ತಮಗೆ ಇಂತಹುದೇ ಖಾತೆ ಬೇಕೆಂದು ಭಾವಿ ಸಚಿವರುಗಳು ಪಟ್ಟು ಹಿಡಿದಿರುವುದು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ ಎನ್ನಲಾಗಿದೆ.

