ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆಯಲಿದ್ದು, ಈಗಾಗಲೇ ಯಾರಿಗೆ ಯಾವ ಖಾತೆ ನೀಡಬೇಕು, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಚರ್ಚೆ ಎರಡೂ ಪಕ್ಷಗಳಲ್ಲಿ ನಡೆಯುತ್ತಿದೆ.
ಜೆಡಿಎಸ್ ನಿಂದ ಈ ಹಿಂದೆ ಕುಮಾರಸ್ವಾಮಿಯವರ ಸಂಪುಟದಲ್ಲಿ ದಕ್ಷಿಣ ಕನ್ನಡ ಭಾಗದ ಮುಸ್ಲಿಂ ಸಮುದಾಯಕ್ಕೆ ಸೇರಿದ ಉದ್ಯಮಿ ಬಿ.ಎಂ. ಫಾರೂಕ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿತ್ತು. ಆದರೆ ಅವರಿಗೀಗ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಭಾಗಗಳನ್ನು ಒಳಗೊಂಡ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಜೆಡಿಎಸ್ ಒಂದೇ ಒಂದು ಸ್ಥಾನಗಳನ್ನೂ ಗೆದ್ದಿಲ್ಲ. ಈ ಭಾಗಕ್ಕೆ ಸೇರಿರುವ ಏಕೈಕ ಶಾಸಕ ಎಂದರೆ ಬಿ.ಎಂ. ಫಾರೂಕ್ ಮಾತ್ರ. ಜೊತೆಗೆ ರಾಜ್ಯಮಟ್ಟದಲ್ಲಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿರುವ ಏಕೈಕ ಮುಸ್ಲಿಂ ನಾಯಕ ಫಾರೂಕ್.
ಆದರೆ, ಎರಡು ಬಾರಿ ರಾಜ್ಯಸಭೆ ಚುನಾವಣೆಗೆ ನಿಂತು ಸೋಲೊಪ್ಪಿಕೊಂಡಿದ್ದ ಫಾರೂಕ್ ಅವರನ್ನು ಜೆಡಿಎಸ್ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಒಂದು ಹುದ್ದೆ ನೀಡಿ ಇದೀಗ ಮತ್ತೊಂದು ಸ್ಥಾನ ನೀಡಲು ಜೆಡಿಎಸ್ ಮುಖಂಡರು ಹಿಂದೇಟು ಹಾಕಿದ್ದಾರೆ.
ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರಗಳಿತ್ತು. ಆದರೆ ಅವರೀಗ ಕೇವಲ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಅವರಿಗೆ ಆರೋಗ್ಯ ಖಾತೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಆರೋಗ್ಯ ಖಾತೆ ಈಗ ಕಾಂಗ್ರೆಸ್ ಪಾಲಾಗಿದೆ. ಇದಲ್ಲದೆ ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರ ಖಾತೆಯೂ ಕಾಂಗ್ರೆಸ್ ಪಾಲಾಗಿದ್ದು ಫಾರೂಕ್ ಪಾಲಿಗೆ ಹಿನ್ನೆಡೆ ಎಂದೇ ಭಾವಿಸಲಾಗಿದೆ.
ಈ ಎಲ್ಲಾ ಕಾರಣಗಳಿಗೆ ದೇವೇಗೌಡರಿಗೆ ಆಪ್ತರಾಗಿದ್ದೂ, ಹಲವು ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಆರ್ಥಿಕ ಸಂಕಷ್ಟದಲ್ಲಿದ್ದಾಗ ಕೈ ಹಿಡಿದೂ ಫಾರೂಕ್ ಸಚಿವ ಸ್ಥಾನ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ.

