ಹಿರಿಯಡ್ಕ: ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (62) ಅನುಮಾನಾಸ್ಪದ ಸಾವಿನ ಪ್ರಕರಣದ ಅಯಾಮ ಬದಲಾಗಿದ್ದು, ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಹುಸೈನಬ್ಬ ಪೊಲೀಸ್ ಜೀಪಿನಲ್ಲಿ ಮೃತಪಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿರುವುದಾಗಿ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಈ ಸಂಬಂಧ ಹಿರಿಯಡ್ಕ ಎಸ್ಸೈ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಡಿ.ಎನ್.ಕುಮಾರ್, ಠಾಣಾ ಜೀಪು ಚಾಲಕ ಗೋಪಾಲ್, ಹೆಡ್‌ಕಾನ್‌ಸ್ಟೇಬಲ್ ಮೋಹನ್ ಕೊತ್ವಾಲ್ ಹಾಗೂ ಬಜರಂಗದಳದ ಕಾರ್ಯಕರ್ತರಾದ ಪೆರ್ಡೂರು ಪಕಾಲು ನಿವಾಸಿ ಚೇತನ್ ಯಾನೆ ಚೇತನ್ ಆಚಾರ್ಯ (22), ಪೆರ್ಡೂರು ಅಲಂಗಾರು ನಿವಾಸಿ ಶೈಲೇಶ್ ಶೆಟ್ಟಿ (20), ಪೆರ್ಡೂರು ಕೆನ್ನೆತ್‌ಬೈಲುವಿನ ಗಣೇಶ್ ನಾಯ್ಕ(24) ಬಂಧಿತರು.
ಬಜರಂಗದಳ ಕಾರ್ಯಕರ್ತರು ಸ್ಕಾರ್ಪಿಯೋ ದ್ವಂಸಗೊಳಿಸಿ ಹುಸೈನಬ್ಬರಿಗೆ ಹಲ್ಲೆ ನಡೆಸಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಬಳಿಕ ಹಲ್ಲೆಯಿಂದಾಗಿ ಹುಸೆನಬ್ಬ ಜೀಪಿನಲ್ಲಿ ಮೃತರಾಗಿದ್ದಾರೆ. ಅಲ್ಲಿಂದ ಪೊಲೀಸರು ಹುಸೈನಬ್ಬರನ್ನು ಇಲಾಖಾ ಜೀಪಿನಲ್ಲಿ ಹಾಗೂ ದನ ಸಾಗಾಟ ಮಾಡಿದ ಸ್ಕಾರ್ಪಿಯೋ ವಾಹನವನ್ನು ಸುರೇಶ್ ಮೆಂಡನ್ ಹಾಗೂ ಇತರ ಆರೋಪಿಗಳು ಠಾಣೆಗೆ ತಂದಿದ್ದರು. ಆಗ ಜೀಪಿನ ಹಿಂಬದಿ ಕುಳಿತಿದ್ದ ಹುಸೈನಬ್ಬ ಮೃತಪಟ್ಟಿದ್ದರು.
ನಂತರ ಪೊಲೀಸರು ಠಾಣೆಗೆ ಬಂದಿದ್ದ ಬಜರಂಗದಳದ ಕಾರ್ಯಕರ್ತರಾದ ಪ್ರಸಾದ್ ಕೊಂಡಾಡಿ ಹಾಗೂ ಇತರರೊಂದಿಗೆ ಸೇರಿ ಮೃತದೇಹವನ್ನು ಕೃತ್ಯ ನಡೆದ ಸ್ಥಳದಿಂದ ಸುಮಾರು ಒಂದು ಕಿ.ಮೀ. ದೂರ ಇಟ್ಟು ಬಂದಿದ್ದರೆಂದು ತನಿಖೆಯಿಂದ ಸತ್ಯ ಹೊರಬಿದ್ದಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಿರಿಯಡ್ಕ ಎಸ್ಸೈ ಹಾಗೂ ಇತರ ಪೊಲೀಸರು ವಿಚಾರಣೆ ವೇಳೆ ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆಂದು ಎಸ್.ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಮಾಹಿತಿ ಕೃಪೆ: ವಾರ್ತಭಾರತಿ

