46fb6189-951e-445d-a17b-c74e66cb0f9e

ಅಡ್ಡೂರು: ಇಲ್ಲಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ಜಂಟಿಯಾಗಿ ರೂಪಿಸಿದ ಶಾಲಾ ಹಿತರಕ್ಷಣ ಸಮಿತಿಯು ಗಲ್ಫ್ ರಾಷ್ಟ್ರದಲ್ಲಿ ಕಾರ್ಯಾಚರಿಸುವ ಅಡ್ಡೂರು ಸೆಂಟ್ರಲ್ ಕಮಿಟಿಯೊಂದಿಗೆ ವಾಹನ ವ್ಯವಸ್ಥೆ ಬಗ್ಗೆ ಬೇಡಿಕೆಯೊಂದು ಇಟ್ಟಿದ್ದು, ಇದಕ್ಕೆ ಸ್ಪಂದಿಸಿದ ಕಮಿಟಿ ಶಾಲೆಗೆ ಮೇ 30ರಂದು ಶಾಲಾ ವಾಹನ ನೀಡಲಿದೆ.

ಸ್ಥಳೀಯವಾಗಿ ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚಿರುವುದರಿಂದ ಈ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ. ಆದರೆ ಕಳೆದ ವರ್ಷದಿಂದ ಶಾಲಾ ಅಭಿವೃದ್ಧಿ ಸಮಿತಿ, ಶಾಲಾ ಹಿತ ರಕ್ಷಣಾ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘ ಹಾಗೂ ಊರವರ ಸಹಕಾರದೊಂದಿಗೆ ಮಕ್ಕಳ ಪ್ರವೇಶಕ್ಕಾಗಿ ವಿಶೇಷ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಈ ಶಾಲೆಯಲ್ಲಿ ಕಲಿತು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಹಿಡಿದಿರುವ ಹಳೆ ವಿದ್ಯಾರ್ಥಿಗಳು ಶಾಲೆಯ ಉಳಿವು ಬಯಸಿ ಶಾಲೆಗೆ ವಾಹನವನ್ನು ದೇಣಿಗೆಯಾಗಿ ನೀಡಿದ್ದಾರೆ.

ಕಳೆದ ವರ್ಷ ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಕಂಪ್ಯೂಟರ್ ಒದಗಿಸುವ ಹಾಗೂ ಶಿಕ್ಷಕರ ನೇಮಕಾತಿಗೆ ಪ್ರಯತ್ನಿಸುವಲ್ಲಿ ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಗುರುಪುರು ಗ್ರಾ.ಪಂ.ಸದಸ್ಯ .ಎ.ಕೆ.ರಿಯಾಝ್,  ಡಾ.ಇ.ಕೆ. ಸಿದ್ದೀಕ್ ಹಾಗೂ ಮತ್ತಿತರರು  ಸೇರಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಈ ಶಾಲಾ ಮಕ್ಕಳ ಅನುಕೂಲಕ್ಕಾಗಿ ಶಾಲಾ ವಾಹನ ಒದಗಿಸುವಲ್ಲೂ ಇವರು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಯಿನಿ ಮಾಹಿತಿ ನೀಡಿದರು.

ಮೇ30 ರಂದು ಬೆಳಿಗ್ಗೆ 9.30ಕ್ಕೆ ಶಾಲಾ ಅಭಿವೃದ್ಧಿ ಸಮಿತಿ, ರಕ್ಷಣಾ ವೇದಿಕೆ ಮತ್ತು ಊರ ಗಣ್ಯರ ಸಮ್ಮುಖದಲ್ಲಿ ಶಾಲೆಗೆ ಮಿನಿ ಬಸ್ ಕೊಡುಗೆಯಾಗಿ ಹಸ್ತಾಂತರಿಸಲಾಗುವುದು ಎಂದರು.

“ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಹಿಂದಿನಿಂದಲೂ ಪ್ರಯತ್ನಿಸುತ್ತಿದ್ದೇನೆ. ಅಡ್ಡೂರು ಶಾಲೆಗೆ ಮಿನಿ ಬಸ್ ಒದಗಿಸುವ ಪ್ರಯತ್ನಕ್ಕೆ ಶಾಲಾ ಅಭಿವೃದ್ಧಿ ಸಮಿತಿ, ಊರವರು, ವೇದಿಕೆ ಮತ್ತು ಕೊಲ್ಲಿ ರಾಷ್ಟ್ರದ ನನ್ನ ಮಿತ್ರರು ಸಹಕರಿಸಿದ್ದಾರೆ. ಎಸ್ಡಿಶಎಂಸಿ, ಶಾಲಾ ರಕ್ಷಣಾ ವೇದಿಕೆ ಈ ಬಸ್ ನಿರ್ವಹಿಸಲಿದೆ” ಎಂದು ಯು.ಪಿ.ಇಬ್ರಾಹೀಂ ತಿಳಿಸಿದ್ದಾರೆ.

“ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಿದರೆ ಈ ಶಾಲೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತೇವೆ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ರಿಯಾಝ್ ಹೇಳಿದ್ದಾರೆ.

6450da2c-4ba4-46c1-9af2-c6ab5dcd922f

 

 

 

 

 

 

 

By suddi9

Leave a Reply

Your email address will not be published. Required fields are marked *