ಬಂಟ್ವಾಳ : ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆಯೇ ದೇವರ ಮೇಲಿರುವ ನಿಜವಾದ ಪ್ರೀತಿ, ಬೊರಿಮಾರ್ ಚರ್ಚ್ ನಲ್ಲಿ ಇದು ಸಾಕ್ಷಾತ್ಕಾರಗೊಳ್ಳುತ್ತಿದೆ ಎಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೊ ಹೇಳಿದರು.

ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಬೊರಿಮಾರ್ ಚರ್ಚ್ ಗೆ ಆದಿತ್ಯವಾರ ಭೇಟಿ ನೀಡಿದ ಅವರು, ವಿಶೇಷ ಬಲಿಪೂಜೆಯನ್ನು ನೆರವೇರಿಸಿ ಆಶೀರ್ವಚನಗೈದರು.
ಕಳೆದ 125 ವರ್ಷದಲ್ಲಿ ಬೊರಿಮಾರ್ ಚರ್ಚ್ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಭಕ್ತಾದಿಗಳಿಗೆ ದೇವರು ನೀಡುವ ಆಶೀರ್ವಾದಕ್ಕೆ ಪ್ರತೀ ತಿಂಗಳು ಇಲ್ಲಿ ಆಚರಿಸುವ ನಾನಾ ಕಾರ್ಯಕ್ರಮಗಳೇ ಸಾಕ್ಷಿ ಎಂದ ಅವರು ದೇವರ ಮೇಲೆ ತೋರಿಸಿದ ಪ್ರೀತಿ ಎಂದಿಗೂ ಕರಗಿ ಹೋಗದು, ಅವನು ಯಾವತ್ತೂ ನಮ್ಮೊಂದಿಗಿದ್ದಾನೆ ಎಂದು ಅವರು ಹೇಳಿದರು. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಅದೃಷ್ಟವನ್ನು ದೇವರು ನನಗೂ ಕಲ್ಪಿಸಿರುವುದ ಕ್ಕೆ ದೇವರಿಗೆ ಕೃತಜ್ಞನಾಗಿದ್ದು, ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ ಚಚ್೯ನ ಧರ್ಮಗುರು, ಪಾಲನಾ ಸಮಿತಿಯನ್ನು ಅಭಿನಂದಿಸಿದರು. ಮಂಗಳೂರು ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಫಾ. ರೋಬರ್ಟ್ ಡಿ’ಸೋಜ, ಫಾದರ್ ಲ್ಯಾನ್ಸಿ, ವಿಕ್ಟರ್ ಡಯಾಸ್, ಸಿಸ್ಟರ್ ನ್ಯಾನ್ಸಿ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ ಉಪಸ್ಥಿತರಿದ್ದರು.
ಇದೇ ವೇಳೆ ಶಿವಮೊಗ್ಗ ಬಿಷಪ್ ಡಾ.ಫ್ರಾನ್ಸಿಸ್ ಸೆರಾವೋ ರವರನ್ನು ಚರ್ಚ್ ಪಾಲನಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಷನ್ ಮಾರ್ಟಿಸ್ ಸ್ವಾಗತಿಸಿದರು.ಚರ್ಚ್ನ ಧರ್ಮಗುರು ಗ್ರೆಗರಿ ಪಿರೇರಾ ವಂದಿಸಿದರು. ಅರಬ್ ದೇಶದಲ್ಲಿ ಬಹುವರ್ಷ ಉದ್ಯೋಗದಲ್ಲಿದ್ದು ನಿವೃತ್ತಿ ಜೀವನ ನಡೆಸುತ್ತಿರುವ ತೋಮಸ್ ಲಸ್ರಾದೋ ಅರಬ್ ವೇಷಭೂಷಣ ಧರಿಸಿ ಕಾರ್ಯಕ್ರಮ ನಿರ್ವಹಿಸಿದ್ದು ಗಮನಸೆಳೆಯಿತು.ಬಳಿಕ “ಜೆರಿ ಮತ್ತು ಜೆರಿ ನೈಟ್” ಬಳಗದಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
