ಚಾಮರಾಜನಗರ: ಇಲ್ಲಿನ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಏಳು ಭಕ್ತರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ಪ್ರಸಾದ ಸೇವಿಸಿ ಮೃತ ಪಟ್ಟ ಭಕ್ತರನ್ನು ಗೋಪಿಯಮ್ಮ(35), ಶಾಂತಾ(20), ಪಾಪಣ್ಣ(35) ಹಾಗೂ ಬಾಲಕಿ ಅನಿತಾ(14) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡ ಎಲ್ಲರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಲ್ವಾಡಿ ಗ್ರಾಮದ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದ ಗೋಪಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಈ ಅವಘಡ ನಡೆದಿದೆ. ಕಾರ್ಯಕ್ರಮದಲ್ಲಿ ರೈಸ್ಬಾತ್ ತಯಾರಿಸಲಾಗಿತ್ತು. ಅದನ್ನು ತಿಂದ ಬಳಿಕ ಎಲ್ಲರೂ ಅವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ದೇವಾಲಯದ ಗೋಪುರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧಗಳು ಎಂಬ ಬಣಗಳು ಹುಟ್ಟಿಕೊಂಡಿದ್ದವು. ಅದರಂತೆ ವಿರೋಧ ಬಣದವರೇ ಈ ಕೃತ್ಯಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಸಾದವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರ ಪರೀಕ್ಷಾ ಫಲಿತಾಂಶದ ನಂತರ ಸತ್ಯಾಂಶ ಹೊರಬೀಳಲಿದೆ.
