ಬಂಟ್ವಾಳ:ದೇಶದಲ್ಲಿ ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೀಡಿದ ಕರೆಯಂತೆ ಸೋಮವಾರ ನಡೆದ ಭಾರತ್ ಬಂದ್ ವೇಳೆ ಇಲ್ಲಿನ ಮೆಲ್ಕಾರ್-ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಡುವಿನ ಬೋಳಂಗಡಿ ಎಂಬಲ್ಲಿ ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಅವರ ಕಾರಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ ಈಗಾಗಲೇ ಒಬ್ಬನನ್ನು ತೀವ್ರ ವಿಚಾರಣೆ ನಡೆಸಿದ ಬಳಿಕ ವಾಪಾಸು ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
ಶಾಸಕರ ಕಾರಿಗೆ ಕಲ್ಲೆಸೆದು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಒಂದು ದಿನದೊಳಗೆ ಬಂಧಿಸದಿದ್ದಲ್ಲಿ ತಾಲ್ಲೂಕು ಬಂದ್ಗೆ ಕರೆ ನೀಡುವುದಾಗಿ ಬಿಜೆಪಿ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕೇವಲ ಕಾಟಾಚಾರಕ್ಕೆ ಯಾರೋ ಒಬ್ಬರನ್ನು ಬಂಧಿಸದೆ ನೈಜ ಆರೋಪಿ ಸಿಕ್ಕಿದಾಗ ಮಾತ್ರ ಆತನಿಗೆ ಕುಮ್ಮಕ್ಕು ನೀಡಿದವರ ಬಗ್ಗೆಯೂ ಸ್ಪಷ್ಟ ಚಿತ್ರಣ ಬಹಿರಂಗಗೊಳ್ಳುತ್ತದೆ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
