ಬಂಟ್ವಾಳ: ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ವತಿಯಿಂದ, ಕುಂಬಾರಿಕ ಗುಡಿ ಕೈಗಾರಿಕೆಯನ್ನು ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಸೇರಿಸುವ ಬಗ್ಗೆ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆಯವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮೂಲಕ ಕರಾವಳಿ ಕುಲಾಲ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ॥ ಎಮ್. ಅಣ್ಣಯ್ಯ ಕುಲಾಲ್ ಉಳ್ತೂರು ರವರು ಮನವಿ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದೀಯವರು ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ನೂರಾರು ಕೌಶಲ್ಯಭರಿತ ಮೂಲ ವೃತ್ತಿಗಳನ್ನು ಗುರುತಿಸಿ ಅವುಗಳಿಗೆ ಮರುಜೀವ ಕೊಡುವ ಕೆಲಸ ಮಾಡಲು ಹೊರಟಿರುವುದು ಬಹು ಶ್ರೇಷ್ಠ ಕೆಲಸ. ಆದರೆ, ಮೂಲ ವೃತ್ತಿಗಳಲ್ಲಿ ಒಂದಾದ ಅತೀ ಪುರಾತನ ನೈಪುಣ್ಯ ಭರಿತ ವೃತ್ತಿಯಾದ ಕುಂಬಾರಿಕೆಯನ್ನು ಆ ಯೋಜನೆಯಲ್ಲಿ ಸೇರಿಸದೆ ಇರುವುದು ಅಥವಾ ಬಿಟ್ಟು ಹೊಗಿರುವುದು ವಿಷಾದಾನೀಯ. ಈ ಕುಂಬಾರ ಸಮುದಾಯ ಹಾಗೂ ಈ ವೃತ್ತಿಯ ಮಹತ್ವವನ್ನು ಅತೀ ಹತ್ತಿರದಿಂದ ಕಂಡು ಬಲ್ಲ ತಾವು ಆದಷ್ಟು ಬೇಗ ಕುಂಬಾರಿಕೆಯನ್ನು ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಸೇರಿಸಬೇಕು. ಈ ಮೂಲಕ ರಾಜ್ಯದ ಸುಮಾರು 20 ಲಕ್ಷ ಕುಲಾಲ್ ಕುಂಬಾರ ಗುಣಗ ಹಾಂಡ, ಚಕ್ರಸಾಲಿ ಮೂಲ್ಯ ಜನಾಂಗಕ್ಕೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೋಟಿ ಗಟ್ಟಲೆಯ ಪ್ರಜಾಪತಿ ಕುಂಭಕಾರ್ ಸಮುದಾಯದ ಮೂಲ ವೃತ್ತಿಗೆ ಮರು ಹುಟ್ಟು ಕೊಡಿಸಬೇಕಾಗಿ ವಿನಂತಿ ಮಾಡಿದ್ದಾರೆ.