ಬಂಟ್ವಾಳ: ಸುಮಾರು 20 ಕೋಟಿ ರೂ ಅಂದಾಜುವೆಚ್ಚದಲ್ಲಿ ಕಾರ್ಯರೂಪಕ್ಕೆ ತರಲು ಉದ್ದೇಶಿಸಿರುವ ಬಿ.ಸಿ.ರೋಡ್ ನ ಸೌಂದರ್ಯಕರಣ ಯೋಜನೆಗೆ ಅಕ್ಟೋಬರ್ 21ರಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಶಿಲಾನ್ಯಾಸ ನಡೆಸಲಿದ್ದಾರೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಹೇಳಿದ್ದಾರೆ.ಶನಿವಾರ ಬಿ.ಸಿ.ರೋಡಿನಲ್ಲಿರುವ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ನಳಿನ್ ಕುಮಾರ್ ಕಟೀಲ್, ಕಂದಾಯ ಸಚಿವ ಆರ್. ಅಶೋಕ್, ವಿವಿಧ ಕಂಪೆನಿಗಳ ಮುಖ್ಯಸ್ತರು ಉಪಸ್ಥಿತರಿರುವರು.
ಇದು ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿದ್ದು, ಬಳಿಕ ಮಿನಿವಿಧಾನಸೌಧದ ಮುಂಭಾಗ ನಡೆಯುವ ಸರಕಾರಿ ಕಾರ್ಯಕ್ರಮದಲ್ಲಿ ತಾಲೂಕಿನ ಸುಮಾರು 700 ಮಂದಿ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿಯಲ್ಲಿ ಕಂದಾಯ ಸಚಿವರು ಹಕ್ಕುಪತ್ರ ಹಾಗೂ ಇತರ ಸವಲತ್ತುಗಳನ್ನು ವಿತರಿಸಲಾಗುತ್ತದೆ.ಈ ಕಾರ್ಯಕ್ರಮದಲ್ಲಿ ಶಾಸಕರಾದ ಸಂಜೀವ ಮಠಂದೂರು,ಯು.ಟಿ.ಖಾದರ್ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮಂಗಳೂರಿನ ವಿನ್ಯಾಸಕಾರ ಧರ್ಮರಾಜ್ ಅವರ ನೆರವಿನಿಂದ ಈಗಾಗಲೇ ಬಿ.ಸಿ.ರೋಡ್ ಸೌಂದರ್ಯಕರಣ ಯೋಜನೆಗೆ ರೂಪುರೇಷೆ ತಯಾರಾಗಿದೆ. ನಗರ ಸೌಂದರ್ಯವೃದ್ಧಿಗೆ ಈಗಾಗಲೇ ಪಕ್ಷಾತೀತ ಸಮಿತಿಯೊಂದನ್ನು ರಚಿಸಲಾಗಿದ್ದು, ವಿದೇಶದಲ್ಲಿರುವ ಬಂಟ್ವಾಳದವರೆ ಆಗಿರುವ ಉದ್ಯಮಿಗಳಾದ ಶಶಿಕಿರಣ್ ಶೆಟ್ಟಿ, ಸಂತೋಷ್ ಕುಮಾರ್, ಬಿ.ಎ,ಮೊಯ್ದೀನ್, ಜೆರಾಲ್ಡ್ ಡಿಮೆಲ್ಲೊ, ಜಗನ್ನಾಥ ಶೆಣೈ ಪ್ರಮುಖವಾಗಿ ಈ ಸಮಿತಿಯಲ್ಲಿದ್ದಾರೆ ಎಂದರು. ಹಾಗೆಯೇ ಎಂ.ಆರ್.ಪಿ.ಎಲ್, ಎನ್.ಎಂ.ಪಿ.ಟಿ., ಒ.ಎನ್.ಜಿ.ಸಿ, ಎಚ್.ಪಿ.ಸಿ.ಎಲ್, ಬಿ.ಪಿ.ಸಿ.ಎಲ್, ಐ.ಒ.ಸಿ.ಎಲ್ ತನ್ನ ನಿಧಿಯನ್ನು ಅಭಿವೃದ್ಧಿಗೆ ನೀಡಲಿದೆ. ಇದರಲ್ಲಿ ಎನ್.ಎಂ.ಪಿ.ಟಿ. ವತಿಯಿಂದ ಹೈಫೈ ದರ್ಜೆಯ ಶೌಚಾಲಯ ನಿರ್ಮಾಣವಾಗಲಿದೆ ಎಂದವರು ಮಾಹಿತಿ ನೀಡಿದರು.
2 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಧುನಿಕ ರೀತಿಯ ಅತ್ಯತ್ಕೃಷ್ಟ ಗುಣಮಟ್ಟದ ಸಿಸಿ ಕ್ಯಾಮರಾ, ಸರ್ವೀಸ್ ರಸ್ತೆಯಲ್ಲಿ ಫುಟ್ ಪಾತ್, ಕೈಕುಂಜೆ ರಸ್ತೆ ಅಗಲೀಕರಣ, ಬಸ್ ನಿಲ್ದಾಣ ಎದುರು ಸರ್ಕಲ್, ಬೀದಿದೀಪ, ಪಾರ್ಕಿಂಗ್ ಈ ಯೋಜನೆಯಲ್ಲಿ ಒಳಗೊಂಡಿದೆ. ವಿಶೇಷವಾಗಿ ಬೀದಿಬದಿ ವ್ಯಾಪರಸ್ಥರಿಗಾಗಿ ವಾರದ ಸಂತೆಗಾಗಿ ವ್ಯವಸ್ಥೆಯನ್ನು ಕಲ್ಪಿಸಲಲಾಗುವುದು .10 ಕೋಟಿ ರೂ ಸಿ.ಎಸ್.ಆರ್ ಫಂಡ್ ನಿಂದ ದೊರಕಲಿದ್ದರೆ, ಮುಖ್ಯಮಂತ್ರಿಯವರು ಈಗಾಗಲೇ 5 ಕೋಟಿ ರೂಗಳನ್ನು ಘೋಷಿಸಿದ್ದಾರೆ. ಉಳಿದದ್ದನ್ನು ತನ್ನ ನಿಧಿಯಿಂದ ಒದಗಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು.ಅತಿಕ್ರಮಣ ತೆರವು, ಹೊಸ ಭೂಸ್ವಾಧೀನ ಇಲ್ಲ:
ಯೋಜನೆ ಜಾರಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಈಗಾಗಲೇ ಗುರುತು ಮಾಡಲಾದ ಜಾಗದಲ್ಲಿ ಅತಿಕ್ರಮಣಗಳಿದ್ದರೆ ತೆರವುಗೊಳಿಸಲಾಗುವುದು. ಈ ಸಂದರ್ಭದಲ್ಲಿ ಯಾವುದೇ ಮಧ್ಯಸ್ಥಿಕೆಗೆ ಇಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕರು, ಈ ಯೋಜನೆ ಕಾರ್ಯರೂಪಕ್ಕೆ ತರುವ ವೇಳೆ ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆ ಮಾಡುವುದಿಲ್ಲ ಎಂದು ತಿಳಿಸಿದರು. ಇದಾದ ಬಳಿಕ ಬಂಟ್ವಾಳಕ್ಕೆ ಸಮರ್ಪಕವಾದ ಯುಜಿಡಿ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಹಿತ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಟ್ರಾಫಿಕ್ ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಪಾಣೆಮಂಗಳೂರಿನಲ್ಲಿ ಜಮೀನನ್ನು ಗುರುತಿಸಲಾಗಿದೆ,ಆರ್ ಟಿ ಒ ಕಚೇರಿ,ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸೂಕ್ತ ಜಮೀನಿನ ತಲಾಶೆ ನಡೆಯುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ,ಪುರಸಭಾ ಸದಸ್ಯ ಎ.ಗೋವಿಂದ ಪ್ರಭು,ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್,ಮಂಗಳೂರು ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಪ್ರ.ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ,ತಾಪಂ ಸದಸ್ಯರಾದ ಪ್ರಭಾಕರ ಪ್ರಭು, ನಾರಾಯಣ ಶೆಟ್ಟಿ,ಪ್ರಮುಖರಾದ ವಿಜಯ ರೈ, ರಮಾನಾಥ ರಾಯಿ,ಪುಷ್ಪರಾಜ ಚೌಟ ಮತ್ತಿತರರು ಉಪಸ್ಥಿತರಿದ್ದರು,
ಭರದ ಸಿದ್ದತೆ: ಶಾಸಕರಿಂದ ಪರಿಶೀಲನೆ ;
ಬಿ.ಸಿ.ರೋಡ್ ಸುಂದರೀಕರಣ ಯೋಜನೆಯ ಪೂರ್ವ ಸಿದ್ದತಾ ಕಾರ್ಯ ಭರದಿಂದ ಸಾಗುತ್ತಿದ್ದು, ಯೋಜನೆಯ ಶಿಲಾನ್ಯಾಸ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದ ಸಿದ್ದತಾ ಕಾರ್ಯವನ್ನು ಶಾಸಕ ರಾಜೇಶ್ ನಾಯ್ಕ್ ಅವರು ಶನಿವಾರ ಖುದ್ದು ಪರಿಶೀಲನೆ ನಡೆಸಿದರು. ಪಕ್ಷದ ಮುಖಂಡರು ಹಾಜರಿದ್ದರು